ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ಅವರ ಮೇಲೆ ನಡೆದಿದ್ದ ಚಾಕು ಇರಿತದ ಘಟನೆ ಇಡೀ ದೇಶವನ್ನೇ ನಡುಗಿಸಿತ್ತು. ಘಟನೆ ನಡೆದು ಒಂದೂವರೆ ವರ್ಷದ ಬಳಿಕ, ಆ ಭಯಾನಕ ರಾತ್ರಿಯ ಕರಾಳ ದಿನಗಳನ್ನು ಸೈಫ್ ಮೊದಲ ಬಾರಿಗೆ ಮಾಧ್ಯಮದ ಮುಂದೆ ಬಿಚ್ಚಿಟ್ಟಿದ್ದಾರೆ.
ಮಗನನ್ನು ರಕ್ಷಿಸಲು ಹೋಗಿ ಕುತ್ತು ತಂದುಕೊಂಡ ಸೈಫ್!
ಖ್ಯಾತ ನಿರೂಪಕಿ ಬರ್ಖಾ ದತ್ ಅವರ ಸಂದರ್ಶನದಲ್ಲಿ ಮಾತನಾಡಿದ ಸೈಫ್, “ಅಂದು ತಡರಾತ್ರಿ ನನ್ನ ಕಿರಿಯ ಮಗ ಜೇಹ್ ಇದ್ದ ಕೋಣೆಗೆ ಸ್ನಾನದ ಗೃಹದ ಕಿಟಕಿ ಮೂಲಕ ಅಪರಿಚಿತನೊಬ್ಬ ನುಗ್ಗಿದ್ದ. ಹಣ ನೀಡದಿದ್ದರೆ ಮಗುವನ್ನು ಕೊಲ್ಲುವುದಾಗಿ ಬೆದರಿಸಿದ್ದ. ಮಗನನ್ನು ಉಳಿಸಲು ನಾನು ಆತನೊಂದಿಗೆ ಹೋರಾಡಿದೆ. ಆದರೆ ಆತ ನನ್ನ ಹಿರಿಯ ಮಗ ತೈಮೂರ್ ಇದ್ದ ರೂಮಿನ ಕಡೆ ಓಡಲು ಯತ್ನಿಸಿದಾಗ, ತಡೆಯಲು ಹೋದ ನನ್ನ ಬೆನ್ನಿಗೆ ಚಾಕುವಿನಿಂದ ಇರಿದ” ಎಂದು ಆತಂಕದ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.
“ಅಪ್ಪಾ ನೀನು ಸಾಯುತ್ತಿದ್ದೀಯಾ?”: ರಕ್ತದ ಮಡುವಿನಲ್ಲಿ ಬಿದ್ದಿದ್ದ ನನ್ನನ್ನು ನೋಡಿ ಮಗ ತೈಮೂರ್, ‘ಅಪ್ಪಾ ನೀನು ಸಾಯ್ತಿಯಾ?’ ಎಂದು ಅಳುತ್ತಾ ಕೇಳಿದ. ಇಲ್ಲ ಮಗನೇ ಏನೂ ಆಗಲ್ಲ ಎಂದು ಹೇಳಿ ಆಸ್ಪತ್ರೆಗೆ ದಾಖಲಾದೆ ಎಂದು ಸೈಫ್ ಭಾವುಕರಾದರು. ಭೀಕರ ದಾಳಿಯಿಂದ ಸೈಫ್ ಬೆನ್ನಿನಲ್ಲಿ ಸಿಲುಕಿದ್ದ ಚಾಕುವಿನ ತುಂಡನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆಯಲಾಗಿತ್ತು.
ಧೈರ್ಯ ತೋರಿದ ಕೆಲಸದಾಕೆ, ಆರೋಪಿ ಬಂಧನ!
ಆ ಕಠಿಣ ಸಮಯದಲ್ಲಿ ಮನೆಯ ಕೆಲಸದಾಕೆ ಧೈರ್ಯದಿಂದ ಕಳ್ಳನನ್ನು ತಳ್ಳಿ ಕೆಳಗೆ ಬೀಳಿಸಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಘಟನೆ ನಡೆದ ಮೂರೇ ದಿನಗಳಲ್ಲಿ ಬಾಂಗ್ಲಾದೇಶ ಮೂಲದ ಆರೋಪಿ ಮೊಹಮ್ಮದ್ ಶರೀಫುಲ್ ಇಸ್ಲಾಂ ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದು, ಕಾನೂನು ಪ್ರಕ್ರಿಯೆ ಮುಂದುವರಿದಿದೆ. “ನನ್ನನ್ನು ಕೊಲ್ಲಲು ಯತ್ನಿಸಿದ ಆ ಕ್ರಿಮಿನಲ್ ಅನ್ನು ನಾನು ಎಂದಿಗೂ ಕ್ಷಮಿಸುವುದಿಲ್ಲ” ಎಂದು ಸೈಫ್ ಆಕ್ರೋಶ ಹೊರಹಾಕಿದ್ದಾರೆ.



