ನೆಟೆ ರೋಗದಿಂದ ತೊಗರಿ ಹಾನಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ಮೊತ್ತ ಘೋಷಣೆ :ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹೊಸದಿಗಂತ ವರದಿ ಕಲಬುರಗಿ :

ಕಲಬುರಗಿ ಮತ್ತು ಬೀದರ ಜಿಲ್ಲೆಯಲ್ಲಿ ಸುಮಾರು‌ 2 ಲಕ್ಷ ಹೆಕ್ಟೇರ್ ಕ್ಕೂ ಹೆಚ್ಚು ಪ್ರಮಾಣದಲ್ಲಿ ನೆಟೆ ರೋಗದಿಂದ ತೊಗರಿ ಬೆಳೆ ಹಾನಿಯಾಗಿದ್ದು, ಇಂದು ಸಂಜೆ (ಮಂಗಳವಾರ) ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸೂಕ್ತ ಪರಿಹಾರ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಜಿಲ್ಲೆಯ ಅಫಜಲಪೂರ ತಾಲೂಕಿನ ಗಾಣಗಾಪೂರನಲ್ಲಿ ವಿಠ್ಠಲ ಹೇರೂರ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿಶೇಷ ವಿಮಾನದ ಮೂಲಕ‌ ಬೆಂಗಳೂರಿನಿಂದ ಕಲಬುರಗಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತೊಗರಿ ಬೆಳೆಗೆ ಪರಿಹಾರ ನೀಡಲು ಸ್ಥಳೀಯ ಜನಪ್ರತಿನಿಧಿಗಳು ಮತ್ತು ರೈತರು ಒತ್ತಾಯಿಸಿದ್ದು, ಎಷ್ಟು ಪರಿಹಾರ ನೀಡಬೇಕು ಎಂಬುದರ ಕುರಿತು ಮಂಗಳವಾರ ಸಂಜೆ ಕೃಷಿ, ಹಣಕಾಸು ಹಾಗೂ ಇತರೆ ಸಂಬಂಧಿತ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರದ ಮೊತ್ತ ನಿರ್ಧರಿಸಲಾಗುವುದು ಎಂದರು.

ಭೆಂಗಳೂರಿನ ಯಲಹಂಕಾದಲ್ಲಿ ಬರುವ ಫೆಬ್ರವರಿ 13 ರಿಂದ 17ರ ವರೆಗೆ ನಡೆಯುವ ಏರೋ ಇಂಡಿಯಾ ಏರ್ ಶೋ ಪೂರ್ವ ಸಿದ್ದತೆ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರೊಂದಿಗೆ ಇಲ್ಲಿಂದನೇ ವಿಡಿಯೊ ಕಾನ್ಪರೆನ್ಸ್ ನಲ್ಲಿ ಭಾಗವಹಿಸಿದ್ದೇ‌ನೆ. ಈ ಬಾರಿ ಅತಿದೊಡ್ಡ ಏರ್ ಶೋ ಮತ್ತು ಏರ್ ಸ್ಪೇಷ್ ಎಕ್ಸಿಬಿಷನ್ ಆಯೋಜಿಸಲಾಗುತ್ತಿದ್ದು, ಪ್ರಧಾನಮಂತ್ರಿ ನರೇಂದ್ರ‌ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸ್ಪೇಸ್ ಕ್ಷೇತ್ರದ ಅನೇಕ ಕಂಪನಿಗಳು, ತಜ್ಞರು ಇದರಲ್ಲಿ ಭಾಗವಹಿಸಲಿದ್ದಾರೆ. 1996 ರಿಂದಲೂ ಕರ್ನಾಟಕ ಏರ್ ಶೋಗೆ ಆತಿಥ್ಯ ವಹಿಸುತ್ತಿರುವುದು ನಾಡಿಗೆ ಗೌರವದ ವಿಷಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಶಿ ವಿಶ್ಚನಾಥ ಮತ್ತು ಉಜ್ಜೈನಿಯ ಕಾಳ ಹಸ್ತಿ ಮಾದರಿಯಲ್ಲಿ ಕಲಬುರಗಿಯ ದತ್ತಾತ್ರೇಯ ಸುಕ್ಷೇತ್ರವಾದ ಗಾಣಗಾಪೂರ ಸಮಗ್ರ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಈಗಾಗಲೆ 5 ಕೋಟಿ ರೂ. ನೀಡಲಾಗಿದೆ. ಜಿಲ್ಲಾಡಳಿತ ದತ್ತನ ಕ್ಷೇತ್ರದ ಅಭಿವೃದ್ಧಿಗೆ 67 ಕೋಟಿ ರೂ. ವೆಚ್ಚದ ಡಿ.ಪಿ.ಆರ್. ಸಿದ್ದಪಡಿಸಿದ್ದು, ಬರುವ ಆಯವ್ಯಯದಲ್ಲಿ ಇದನ್ನು ಘೋಷಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ಸಿ.ಎಂ. ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೆ.ಕೆ.ಆರ್.ಡಿ.ಬಿ. ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಶಾಸಕರಾದ ಬಸವರಾಜ ಮತ್ತಿಮೂಡ, ಸುಭಾಷ ಗುತ್ತೇದಾರ, ಎಂ.ಎಲ್.ಸಿ ಗಳಾದ ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!