ಸಂಭಾಲ್ ಹಿಂಸಾಚಾರದಲ್ಲಿ ಆಸ್ತಿಪಾಸ್ತಿಗಳಿಗೆ ಹಾನಿ: ಪ್ರತಿಭಟನಾಕಾರರಿಂದಲೇ ನಷ್ಟ ವಸೂಲಿಗೆ ಮುಂದಾದ ಯುಪಿ ಸರ್ಕಾರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶ ಸಂಭಾಲ್ ಹಿಂಸಾಚಾರದಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಉಂಟಾದ ನಷ್ಟದ ಪರಿಹಾರವನ್ನು ಪ್ರತಿಭಟನಾಕಾರರಿಂದಲೇ ವಸೂಲು ಮಾಡಲು ಯೋಗಿ ಸರ್ಕಾರ ಮುಂದಾಗಿದೆ.

ಈ ನಿಟ್ಟಿನಲ್ಲಿ ಹಿಂಸಾಚಾರದಲ್ಲಿ ಕಲ್ಲು ತೂರಾಟ ನಡೆಸಿ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದ ಪ್ರತಿಭಟನಾಕಾರರ ಫೋಟೊಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸಲಾಗುವುದು ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.

ನ್ಯಾಯಾಲಯದ ಆದೇಶದ ಮೇರೆಗೆ ನಗರದ ಕೋಟ್ ಗರ್ವಿ ಪ್ರದೇಶದ ಶಾಹಿ ಜಾಮಾ ಮಸೀದಿಯ ಸರ್ವೇ ಕಾರ್ಯ ನಡೆಯುತ್ತಿದ್ದ ವೇಳೆ ಭಾನುವಾರ ಭುಗಿಲೆದ್ದ ಘರ್ಷಣೆಯಲ್ಲಿ ನಾಲ್ವರು ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಹಲವಾರು ಜನ ಗಾಯಗೊಂಡಿದ್ದರು.

ಇದೀಗ ಸಂಭಾಲ್ ಹಿಂಸಾಚಾರದಲ್ಲಿ ಭಾಗಿಯಾಗಿರುವ ವ್ಯಕ್ತಿಗಳ ಪೋಸ್ಟರ್‌ಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗುವುದು ಮತ್ತು ನಷ್ಟದ ಪರಿಹಾರವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. ಗಲಭೆಕೋರರನ್ನು ಬಂಧಿಸಲು ಸಹಾಯಕವಾಗುವಂಥ ಮಾಹಿತಿ ನೀಡಿದವರಿಗೆ ಬಹುಮಾನವನ್ನು ಸಹ ಘೋಷಿಸಬಹುದು ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.

ಈ ಹಿಂದೆ 2020ರಲ್ಲಿ ಸಿಎಎ ವಿರೋಧಿ ಪ್ರತಿಭಟನೆ ವೇಳೆಯಲ್ಲಿಯೂ ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ ಉಂಟುಮಾಡುವವರ ವಿರುದ್ಧವೂ ಯೋಗಿ ಸರ್ಕಾರ ಇದೇ ರೀತಿಯ ಕ್ರಮ ಕೈಗೊಂಡಿತ್ತು. ರಾಜ್ಯ ರಾಜಧಾನಿ ಸೇರಿದಂತೆ ನಗರದ ಅನೇಕ ಕಡೆಗಳಲ್ಲಿ ಫೋಸ್ಟರ್ ಹಾಕಲಾಗಿತ್ತು. ಆದರೆ, ಕೋರ್ಟ್ ಆದೇಶದ ನಂತರ ಅವುಗಳನ್ನು ತೆರವುಗೊಳಿಸಲಾಯಿತು.

ಈ ಮಧ್ಯೆ ಹಿಂಸಾಚಾರ ಸಂಭವಿಸಿದ ಮೂರನೇ ದಿನವಾದ ಭಾನುವಾರವೂ ಸಂಭಾಲ್ ನಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. ಮಸೀದಿ ಬಳಿ ತಡೆ ವಾಹನಗಳು, ಲೋಹ ಶೋಧಕ, ಬ್ಯಾಟನ್ ಗಳೊಂದಿಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇಂಟರ್ ನೆಟ್ ಸ್ಥಗಿತ ಮುಂದುವರೆದಿದ್ದು, ಉಳಿದ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ ಎಂದು ಸಂಭಾಲ್ ಎಸ್ ಪಿ ಕೃಷ್ಣನ್ ಕುಮಾರ್ ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!