ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಚಾಂಪಿಯನ್ಸ್ ಟ್ರೋಫಿ ಆಯೋಜನೆ ವಿಚಾರದಲ್ಲಿ ಬಿಸಿಸಿಐ ಜೊತೆ ಮಾತಿನ ಸಮರ ಶುರುಮಾಡಿರುವ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ)ಗೆ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಮುಖಭಂಗ ಎದುರಾಗಿದ್ದು, ಪಾಕಿಸ್ತಾನಕ್ಕೆ ಬಂದಿದ್ದ ಶ್ರೀಲಂಕಾ ಕ್ರಿಕೆಟ್ ತಂಡ ಸ್ವದೇಶಕ್ಕೆ ವಾಪಸ್ ಆಗಿದೆ.
ಪಾಕಿಸ್ತಾನದಲ್ಲಿ ಆಯೋಜನೆಯಾಗಿದ್ದ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ‘ಎ’ ಸರಣಿ ರದ್ದಾಗಿದ್ದು, ಶ್ರೀಲಂಕಾ ಕ್ರಿಕೆಟ್ ತಂಡ ಇದೀಗ ಪಾಕಿಸ್ತಾನವನ್ನು ತೊರೆದು ತವರು ಶ್ರೀಲಂಕಾಕ್ಕೆ ವಾಪಸ್ ಆಗುತ್ತಿದೆ.
ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವಿನ ಸರಣಿಯ ಕೊನೆಯ ಎರಡು ಪಂದ್ಯಗಳನ್ನು ಸದ್ಯಕ್ಕೆ ಮುಂದೂಡಲಾಗಿದೆ ಎಂದು ಸ್ವತಃ ಪಿಸಿಬಿ ಮಾಹಿತಿ ನೀಡಿದೆ.
ಕಳೆದ ಕೆಲವು ದಿನಗಳಿಂದ ರಾವಲ್ಪಿಂಡಿಯಲ್ಲಿ ಪಾಕಿಸ್ತಾನ ಶಾಹೀನ್ ಮತ್ತು ಶ್ರೀಲಂಕಾ ಎ ನಡುವೆ ಸರಣಿ ನಡೆಯುತ್ತಿದ್ದು, ಮೊದಲ ನಾಲ್ಕು ದಿನಗಳ ಅನಧಿಕೃತ ಟೆಸ್ಟ್ ಪಂದ್ಯ ಮುಗಿದಿದೆ. ಪಾಕಿಸ್ತಾನ ಶಾಹೀನ್ ನಾಲ್ಕು ದಿನಗಳ ಎರಡೂ ಪಂದ್ಯಗಳನ್ನು ಗೆದ್ದುಕೊಂಡಿದ್ದು, ಏಕದಿನ ಸರಣಿಯ ಮೊದಲ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಸರಣಿಯಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆ.
ಆದರೆ ಕಳೆದ 48 ಗಂಟೆಗಳಿಂದ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ, ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಈ ಸರಣಿಯನ್ನು ಸದ್ಯಕ್ಕೆ ಮುಂದೂಡಲು ನಿರ್ಧರಿಸಿದೆ. ಸರಣಿಯನ್ನು ಪೂರ್ಣಗೊಳಿಸಲು ಹೊಸ ದಿನಾಂಕಗಳನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.