ದಿಂಗಾಲೇಶ್ವರ ಸ್ವಾಮೀಜಿ ಆರೋಪದಲ್ಲಿ ಸತ್ಯಾಂಶವಿಲ್ಲ: ಕಾಗಿನೆಲೆ ಸ್ವಾಮೀಜಿ

ಹೊಸದಿಗಂತ ವರದಿ, ಚಿತ್ರದುರ್ಗ :

ಮಠಮಾನ್ಯಗಳಿಗೆ ಅನುದಾನ ಪಡೆಯುವಲ್ಲಿ ಶೇಕಡಾ ೩೦ ರಷ್ಟು ಕಮಿಷನ್ ಕೊಡಬೇಕೆಂದು ದಿಂಗಾಲೇಶ್ವರ ಸ್ವಾಮೀಜಿ ಮಾಡಿರುವ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಅಧ್ಯಕ್ಷರಾದ ಕಾಗಿನೆಲೆ ಕನಕ ಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಬೋವಿ ಗುರುಪೀಠದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆದಾಗ ಮಠಮಾನ್ಯಗಳಿಗೆ ಅನುದಾನ ಕೊಡುವ ಪರಿಪಾಠ ಆರಂಭವಾಯಿತು. ಅದಾದ ಬಳಿಕ ಸದಾನಂದಗೌಡ, ಜಗದೀಶ್ ಶೆಟ್ಟರ್ ಕಾಲದಲ್ಲೂ ಮುಂದುವರಿಯಿತು. ನಂತರ ಬಂದ ಎಲ್ಲ ಸಿಎಂಗಳು, ಈಗಿನ ಬಸವರಾಜ ಬೊಮ್ಮಾಯಿ ಅವರೂ ಸಹ ಮಠಗಳಿಗೆ ಅನುದಾನ ನೀಡಿದ್ದಾರೆ. ಆದರೆ ನಾವು ಅನುದಾನ ಪಡೆದಿದ್ದಕ್ಕೆ ಯಾರಿಗೂ ಕಮಿಷನ್ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ನೀಡುವ ಅನುದಾನ ಜಿಲ್ಲಾಡಳಿತಕ್ಕೆ ಬರುತ್ತದೆ. ಅವರು ಕೇಳುವ ಅಗತ್ಯ ದಾಖಲೆಗಳನ್ನು ಸಲ್ಲಿಸಿದಲ್ಲಿ ಅನುದಾನ ಬಿಡುಗಡೆ ಮಾಡುತ್ತಾರೆ. ಇದಕ್ಕಾಗಿ ಯಾವುದೇ ಜನಪರತಿನಿಧಿಗಳು ಅಥವಾ ಅಧಿಕಾರಿಗಳಿಗೆ ನಯಾ ಪೈಸೆ ಕಮಿಷನ್ ನೀಡಿಲ್ಲ. ಅನುದಾನ ಪಡೆಯಲು ಕಮಿಷನ್ ಕೊಡುವುದಾದಲ್ಲಿ ಅಂತಹ ಅನುದಾನವೇ ನಮಗೆ ಬೇಡ. ಭಿಕ್ಷೆ ಬೇಡಿ ಸಮುದಾಯದ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳಿದರು.
ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಗೌರವಾಧ್ಯಕ್ಷರಾದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಮಾತನಾಡಿ, ಮಠಮಾನ್ಯಗಳು ಸರ್ಕಾರದ ಅನುದಾನ ಪಡೆಯಲು ಕಮಿಷನ್ ನೀಡಬೇಕೆಂಬ ಆರೋಪ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಆದರೆ ದಲಿತ, ಹಿಂದುಳಿದ, ಶೋಷಿತ ಸಮುದಾಯಗಳ ಮಠಗಳ ಅಭಿವೃದ್ಧಿಗೆ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಬಾರಿ ಅನುದಾನ ನೀಡಿದ್ದಾರೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ೧೧೯ ಕೋಟಿ ಬಿಡುಗಡೆ ಮಾಡಿದ್ದಾರೆ. ಇದಕ್ಕೆ ಯಾರಿಗೂ ಕಮಿಷನ್ ನೀಡಿಲ್ಲ ಎಂದು ಹೇಳಿದರು.
ದಲಿತ, ಹಿಂದುಳಿದ ಮಠಾಧೀಶರ ಒಕ್ಕೂಟದ ಪ್ರಧಾನ ಕಾರ್ಯದಶಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮಾತನಾಡಿ, ಮಠಗಳಿಗೆ ಸರ್ಕಾರ ನೀಡುವ ಅನುದಾನಕ್ಕೆ ಕಮಿಷನ್ ನೀಡಬೇಕೆಂಬ ಆರೋಪ ಇತ್ತೀಚಿನ ದಿನಗಳಲ್ಲಿ ಕೇಳೀಬರುತ್ತಿದೆ. ಕಳೆದ ೮-೧೦ ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ಮಾಡಿದ ಸರ್ಕಾರಗಳು ಮಠಗಳ ಅಭಿವೃದ್ಧಿ, ಶೈಕ್ಷಣಿಕ ಸಾಮಾಜಿಕ ಚಟುವಟಿಕೆಗಳಿಗೆ ಅನುದಾನ ನೀಡಿವೆ. ಆದರೆ ಈವರೆಗೆ ಯಾರೂ ಕಮಿಷನ್ ಕೇಳಿಲ್ಲ. ಆದರೆ ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ಜಯರೇಣುಕಾನಂದ ಸ್ವಾಮೀಜಿ, ಕೃಷ್ಣ ಯಾದವಾನಂದ ಸ್ವಾಮೀಜಿ, ಕಾರ್ಯದರ್ಶಿ ಶಾಂತವೀರ ಸ್ವಾಮೀಜಿ, ಸಹ ಕಾರ್ಯದರ್ಶಿ ಬಸವ ಮಾಚಿದೇವ ಸ್ವಾಮೀಜಿ, ಸಂಘಟನಾ ಕಾರ್ಯದರ್ಶಿ ಬಸವಕುಮಾರ ಸ್ವಾಮೀಜಿ, ಸಂಚಾಲಕರಾದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕುಂಬಾರ ಗುಂಡಯ್ಯ ಸ್ವಾಮೀಜಿ, ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮತ್ತಿತರರು ಹಾPಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!