ಪಾಕ್ ಜನತೆಗೆ ಕತ್ತಲೆ ಭಾಗ್ಯ: ರಾಷ್ಟ್ರವ್ಯಾಪಿ ವಿದ್ಯುತ್ ಬಿಕ್ಕಟ್ಟು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕಿಸ್ತಾನ ಇಂದು ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿದ್ದು, ಈಗಾಗಲೇ ಆಹಾರದ ಕೊರತೆ ಹೆಚ್ಚಿದೆ. ಇದರ ನಡುವೆ ವಿದ್ಯುತ್ ಬಿಕ್ಕಟ್ಟು (Pakistan Power Crisis) ಕಂಗಾಲು ಮಾಡಿದೆ.

ರಾಜಧಾನಿ ಇಸ್ಲಾಮಾಬಾದ್ (Islamabad), ವಾಣಿಜ್ಯ ನಗರಿ ಕರಾಚಿ (Karachi), ಸಾಂಸ್ಕೃತಿಕ ನಗರಿ ಲಾಹೋರ್ (Lahore) ಸೇರಿದಂತೆ ಪಾಕಿಸ್ತಾನದ ಬಹುತೇಕ ಎಲ್ಲ ನಗರಗಳೂ ಕತ್ತಲಲ್ಲಿ ಮುಳುಗಿವೆ.

ರಾಷ್ಟ್ರೀಯ ಗ್ರಿಡ್‌ನಲ್ಲಿ ಕೂಡ ಕಡಿಮೆ ಆವರ್ತನದಿಂದಾಗಿ ವಿದ್ಯುತ್ ಕಡಿತ (Pakistan Power Crisis) ಅನುಭವಿಸಿದೆ. ಲಕ್ಷಾಂತರ ಜನರು ವಿದ್ಯುತ್ ಇಲ್ಲದೇ ಪರದಾಡಿದ್ದಾರೆ ಎಂದು ಪಾಕಿಸ್ತಾನ ಇಂಧನ ಸಚಿವಾಲಯ ತಿಳಿಸಿದೆ.

ವಿದ್ಯುತ್ ಅನ್ನು ಸಂಪೂರ್ಣವಾಗಿ ಪುನಃಸ್ಥಾಪಿಸಲು 12 ಗಂಟೆಗಳವರೆಗೆ ತೆಗೆದುಕೊಳ್ಳಬಹುದು ಎಂದು ಪಾಕಿಸ್ತಾನದ ವಿದ್ಯುತ್ ಸಚಿವರು ಹೇಳಿದ್ದಾರೆ.

ಪಾಕಿಸ್ತಾನದ ವಿದ್ಯುಚ್ಛಕ್ತಿ ವಿತರಣಾ ವ್ಯವಸ್ಥೆಯು ಸಂಕೀರ್ಣ ಮತ್ತು ಸೂಕ್ಷ್ಮ ಜಾಲವಾಗಿದೆ. ಗ್ರಿಡ್‌ನ ಒಂದು ವಿಭಾಗದಲ್ಲಿನ ಸಮಸ್ಯೆಯು ದೇಶದಾದ್ಯಂತ ಕ್ಯಾಸ್ಕೇಡಿಂಗ್ ಸ್ಥಗಿತಗಳಿಗೆ ಕಾರಣವಾಗಬಹುದು. ದೇಶದ ದಕ್ಷಿಣ ಭಾಗದಲ್ಲಿ ಜಮ್‌ಶೊರೊ ಮತ್ತು ದಾದು ನಗರಗಳ ನಡುವೆ ಆವರ್ತನ ಬದಲಾವಣೆ ವರದಿಯಾಗಿದೆ. ಎಲ್ಲ ವ್ಯವಸ್ಥೆಗಳನ್ನು ಒಂದೊಂದಾಗಿ ಸ್ಥಗಿತಗೊಳಿಸಲಾಗಿದೆ.

ಸೋಮವಾರ ಬೆಳಗ್ಗೆ ಸಿಸ್ಟಮ್‌ಗಳನ್ನು ಆನ್ ಮಾಡಿದಾಗ, ದೇಶದ ದಕ್ಷಿಣದಲ್ಲಿ ದಾದು ಮತ್ತು ಜಮ್‌ಶೋರೊ ನಡುವೆ ಆವರ್ತನ ವ್ಯತ್ಯಾಸ ಮತ್ತು ವೋಲ್ಟೇಜ್ ಏರಿಳಿತ ಗಮನಿಸಲಾಗಿದೆ ಎಂದು ವಿದ್ಯುತ್ ಸಚಿವ ಖುರ್ರುಮ್ ದಸ್ತಗಿರ್ ಮಾಹಿತಿ ನೀಡಿದ್ದಾರೆ.

ಪಾಕಿಸ್ತಾನದ ಕೋಟ್ಯಂತರ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇತ್ತೀಚೆಗಷ್ಟೇ ಪಾಕ್ ಪ್ರಧಾನಿ ಶೆಹ್​ಬಾಜ್ ಷರೀಫ್ ಕೇಂದ್ರ ಮತ್ತು ಎಲ್ಲ ಪ್ರಾಂತೀಯ ಸರ್ಕಾರಗಳಿಗೆ ವಿದ್ಯುತ್ ಬಳಕೆ ಕಡಿಮೆ ಮಾಡುವಂತೆ ಸೂಚಿಸಿದ್ದರು. ರಾತ್ರಿ 10:30ರ ನಂತರ ದೇಶದಲ್ಲಿ ವಿದ್ಯುತ್ ಬಳಕೆ ಸಂಪೂರ್ಣವಾಗಿ ನಿಲ್ಲಬೇಕು. ರಾತ್ರಿ 8:30ಕ್ಕೆ ವ್ಯಾಪಾರ-ವ್ಯವಹಾರಗಳು ಕೊನೆಯಾಗಬೇಕು ಎಂದು ಆದೇಶಿಸಿದ್ದರು. ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿದ್ದ ಪಾಕಿಸ್ತಾನದ ಉದ್ಯಮಗಳು ಈ ಆದೇಶದ ನಂತರ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!