August 10, 2026
Monday, August 10, 2026
spot_img

ರೇಣುಕಾಸ್ವಾಮಿ ಖಾಸಗಿ ಅಂಗಕ್ಕೆ ದರ್ಶನ್‌ ಹತ್ತಾರು ಬಾರಿ ಒದ್ದಿದ್ದರು: ಪ್ರದೋಷ್ ಸಲ್ಲಿಸಿದ ಅರ್ಜಿಯಲ್ಲಿ ಏನಿದೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್‌ ಕೇಸ್‌ನ 14ನೇ ಆರೋಪಿ ಪ್ರದೋಷ್‌ ನ್ಯಾಯಾಲಯಕ್ಕೆ 11 ಪುಟಗಳ ಕ್ಷಮಾದಾನ ಅರ್ಜಿಯನ್ನು ನೀಡಿದ್ದಾರೆ. ತಾನು ಮಾಡಿದ ಪ್ರತೀ ತಪ್ಪಿಗೂ ಪಶ್ಚಾತ್ತಾಪ ವ್ಯಕ್ತಪಡಿಸಿರುವ ಪ್ರದೋಷ್‌, ಘಟನೆಯ ಸುತ್ತಮುತ್ತ ಏನೆಲ್ಲಾ ಆಯ್ತು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಅರ್ಜಿಯಲ್ಲಿ ಏನೆಲ್ಲಾ ಇದೆ?

ಜಯನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದ ವೇಳೆ 2003 ರಿಂದ ದರ್ಶನ್‌ ನನಗೆ ಪರಿಚಯವಿದ್ದಾರೆ. 2024 ರ ಜೂನ್ 8 ರಂದು ನಾನು ದರ್ಶನ್ ಮನೆಗೆ ತೆರಳಿದ್ದೆ. ಅಲ್ಲಿಂದ ನನ್ನನ್ನು ದರ್ಶನ್‌ ‘ಸ್ಟೋನಿ ಬ್ರೂಕ್ಸ್’ ರೆಸ್ಟೋರೆಂಟ್‌ಗೆ ಕರೆದೊಯ್ದರು. ಅಲ್ಲಿ ಮೂರು ಗಂಟೆ ಸುಮಾರಿಗೆ ಪವನ್‌ ರೆಸ್ಟೋರೆಂಟ್‌ ಬಳಿ ಬಂದು ಫೋನ್‌ನಲ್ಲಿ ದರ್ಶನ್‌ಗೆ ಏನೋ ತೋರಿಸಿದೆ. ಅದನ್ನು ನೋಡಿ ಗರಂ ಆದ ದರ್ಶನ್‌ ತಕ್ಷಣಾ ಪವಿತ್ರಾ ಗೌಡಗೆ ಕರೆ ಮಾಡಿದ್ರು. ಆನಂತರ ನನಗೆ ಪವಿತ್ರಾ ಮನೆ ಕಡೆ ಗಾಡಿ ಓಡಿಸು ಎಂದು ಹೇಳಿದರು ಎಂದಿದ್ದಾರೆ.

ಪಟ್ಟಣಗೆರೆ ಶೆಡ್‌ಗೆ ಹೋದಾಗ ಏನಾಯ್ತು?

ಸಂಜೆ ನಾಲ್ಕೂವರೆ ಸುಮಾರಿಗೆ ಎಲ್ಲರೂ ಪವಿತ್ರಾ ಮನೆಯ ಬಳಿ ಬಂದೆವು. ಪಟ್ಟಣಗೆರೆ ಶೆಡ್‌ನಲ್ಲಿ 30 ವರ್ಷದ ರೇಣುಕಾಸ್ವಾಮಿ ತಲೆಬಾಗಿಸಿಕೊಂಡು ಕುಳಿತಿದ್ದ. ಆತನ ಸುತ್ತ ರಾಘವೇಂದ್ರ, ಪವನ್‌, ನಾಗರಾಜ್‌ ಹಾಗೂ ನಂದೀಶ್‌ ಇದ್ದರು.

ಚಪ್ಪಲಿಯಿಂದ ಬಾರಿಸಿದ ಪವಿತ್ರಾ ಗೌಡ

ರೇಣುಕಾಸ್ವಾಮಿಯನ್ನು ಕಂಡಿದ್ದೇ ದರ್ಶನ್‌ ಸಿಟ್ಟಿನಲ್ಲಿ ನನ್ನ ಪವಿತ್ರಾಗೆ ಅಶ್ಲೀಲ ಮೆಸೇಜ್‌ ಕಳಿಸ್ತೀಯಾ ಎಂದು ಕೆಟ್ಟ ಭಾಷೆಯಲ್ಲಿ ಬೈದು ಹೊಡೆದರು. ನಂತರ ಪವಿತ್ರಾ ಕಡೆ ತಿರುಗಿ ಚಪ್ಪಲಿಯಲ್ಲಿ ಬಾರಿಸು ಎಂದರು. ಅಂತೆಯೇ ಪವಿತ್ರಾ ಚಪ್ಪಲಿಯಿಂದ ರೇಣುಕಾಸ್ವಾಮಿಗೆ ಹೊಡೆದರು ಎಂದು ಬರೆದಿದ್ದಾರೆ.

ಒಳ ಉಡುಪನ್ನೂ ತೆಗೆಸಿ ಖಾಸಗಿ ಅಂಗಕ್ಕೆ ಒದ್ದ ದರ್ಶನ್‌

ರೇಣುಕಾಸ್ವಾಮಿಯನ್ನು ಬಟ್ಟೆ ಬಿಚ್ಚಿಸಿ ಒಳಉಡುಪಿನಲ್ಲಿ ನಿಲ್ಲಿಸಲಾಗಿತ್ತು. ನಂದೀಶ್ ಆತನನ್ನು ಟಾಟಾ ಏಸ್ ವಾಹನಕ್ಕೆ ನೇಣು ಹಾಕಲು ಯತ್ನಿಸಿದರೆ, ನಾಗರಾಜ್ ನೈಲಾನ್ ಹಗ್ಗದಿಂದ ಹಾಗೂ ನಂದೀಶ್-ಪವನ್ ಮರದ ಕೋಲಿನಿಂದ ಬಾರಿಸಿದರು. ಆನಂತರ ಆತನ ಫೋನ್‌ನಲ್ಲಿ ಗೌತಮ್‌ ಹೆಸರಿನ ಇನ್ಸ್ಟಾಗ್ರಾಮ್‌ ಖಾತೆ ಪತ್ತೆಯಾಗಿತ್ತು. ಅದರಲ್ಲಿ ಬರೀ ಪವಿತ್ರಾಗೆ ಅಷ್ಟೇ ಅಲ್ಲ ನೂರಾರು ಮಹಿಳೆಯರಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳಿಸಿರುವುದನ್ನು ನೋಡಿದೆವು. ಆಗ ದರ್ಶನ್‌ಗೆ ಕೋಪ ಹೆಚ್ಚಾಗಿ ಆತನ ಒಳಉಡುಪನ್ನೂ ತೆಗೆಸಿ ಖಾಸಗಿ ಅಂಗಕ್ಕೆ ಹತ್ತಾರು ಬಾರಿ ಒದ್ದರು, ನಂತರ ಅಂಗಾತ ಬಿದ್ದಿದ್ದ ರೇಣುಕಾಸ್ವಾಮಿ ಎದೆಗೆ ಒದ್ದು ವಿನಯ್‌ ಜೊತೆ ಹೋದರು ಎಂದಿದ್ದಾರೆ.

ಚರಂಡಿಗೆ ಬಿಸಾಕಿ ಸರಂಡರ್‌ ಆದರು

ನಾನು ಇನ್ಸ್‌ಪೆಕ್ಟರ್ ವಿನಯ್‌ಗೆ ಕರೆ ಮಾಡಿ ವಿಷಯ ತಿಳಿಸಿದಾಗ, “ಪ್ರಕರಣ ಗಂಭೀರವಾಗಿದೆ, ಯಾರನ್ನಾದರೂ ಶರಣಾಗುವಂತೆ ಮಾಡಿ” ಎಂದು ಸಲಹೆ ನೀಡಿದರು. ರಾಘವೇಂದ್ರ, ನಂದೀಶ್ ಮತ್ತು ಪವನ್ ಶರಣಾಗಲು ಒಪ್ಪಿಕೊಂಡಾಗ, ರೇಣುಕಾಸ್ವಾಮಿ ಮೃತದೇಹವನ್ನು ‘ಸತ್ವ ಅಪಾರ್ಟ್‌ಮೆಂಟ್’ ಬಳಿಯ ಚರಂಡಿಗೆ ಬಿಸಾಡಿ, ಬಳಿಕ ಅವರು ಕಾಮಾಕ್ಷಿಪಾಳ್ಯ ಠಾಣೆಗೆ ಸರೆಂಡರ್ ಆಗಲು ತೆರಳಿದರು ಎಂದಿದ್ದಾರೆ.

ಇನ್ನೇನಿದೆ?

ಶವವನ್ನು ಹೇಗೆ ಸಾಗಣೆ ಮಾಡಿದ್ದರು, ಪೊಲೀಸರಿಗೆ ಶರಣಾಗುವವರಿಗೆ ಹಾಗೂ ಸಾಕ್ಷ್ಯ ನಾಶಕ್ಕೆ ಮೂವತ್ತು ಲಕ್ಷ ರೂಪಾಯಿ ಖರ್ಚಾಗಿತ್ತು. ಅದನ್ನು ಹೇಗೆ ಹೊಂದಿಸಲಾಯಿತು ಎಂದು ಬರೆದಿದ್ದಾರೆ. ನಾನು ರೇಣುಕಾಸ್ವಾಮಿಯನ್ನು ರಕ್ಷಿಸಲು ಹಾಗೂ ವಾರ್ನಿಂಗ್‌ ಕೊಟ್ಟು ಬಿಟ್ಟುಬಿಡಿ ಎಂದು ದರ್ಶನ್‌ ಹಾಗೂ ಇತರರಲ್ಲಿ ಮನವಿ ಮಾಡಿದೆ ಆದರೆ ಯಾರೂ ಕೇಳಲಿಲ್ಲ. ನನಗೆ ಪಶ್ಚಾತ್ತಾಪವಿದೆ. ನ್ಯಾಯಾಲಯದ ಮುಂದೆ ಸತ್ಯ ಹೇಳಲು ಮಾಫಿ ಸಾಕ್ಷಿಯಾಗುತ್ತಿದ್ದೇನೆ ಎಂದು ಪ್ರದೋಷ್ ತಮ್ಮ 11 ಪುಟಗಳ ಸುದೀರ್ಘ ಅರ್ಜಿಯಲ್ಲಿ ಉಲ್ಲೇಖಿಸಿದ್ದಾನೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !