October 16, 2026
Friday, October 16, 2026
spot_img

ಜೈಲಿನಲ್ಲಿ 365 ದಿನ ಕಳೆದ ದರ್ಶನ್: ಮುಗಿಯದ ಕಾನೂನು ಹೋರಾಟ, ಮರೀಚಿಕೆಯಾದ ಜಾಮೀನು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಜೈಲು ಸೇರಿ ಈಗ ಭರ್ತಿ ಒಂದು ವರ್ಷ ಸಂದಿದೆ.

ಪವಿತ್ರಾ ಗೌಡ ವಿರುದ್ಧ ಅವಾಚ್ಯ ಶಬ್ದ ಬಳಸಿದ ಎಂಬ ಕಾರಣಕ್ಕೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಹತ್ಯೆ ಮಾಡಿದ ಆರೋಪದ ಮೇಲೆ ದರ್ಶನ್ ಜೈಲು ಪಾಲಾಗಿದ್ದರು. ಪ್ರಕರಣ ನಡೆದು ಸರಿಸುಮಾರು 20 ತಿಂಗಳುಗಳು ಕಳೆದಿದ್ದರೂ, ದರ್ಶನ್ ಜೈಲಿನಲ್ಲಿ ಕಳೆದ ಒಟ್ಟು ದಿನಗಳ ಸಂಖ್ಯೆ 365ಕ್ಕೆ ತಲುಪಿದೆ.

ದರ್ಶನ್ ಮೊದಲ ಬಾರಿಗೆ 2024ರ ಜೂನ್ 11ರಂದು ಮೈಸೂರಿನಲ್ಲಿ ಬಂಧನಕ್ಕೊಳಗಾಗಿದ್ದರು. ಅಂದು ಪರಪ್ಪನ ಅಗ್ರಹಾರ ಮತ್ತು ಬಳ್ಳಾರಿ ಜೈಲುಗಳಲ್ಲಿ ಒಟ್ಟು 131 ದಿನಗಳ ಕಾಲ ಕಳೆದು ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾದ ಹಿನ್ನೆಲೆಯಲ್ಲಿ 2025ರ ಆಗಸ್ಟ್ 14ರಂದು ಅವರು ಮತ್ತೆ ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಸೇರಬೇಕಾಯಿತು. ಎರಡನೇ ಅವಧಿಯಲ್ಲಿ ದರ್ಶನ್ ಈಗಾಗಲೇ 226 ದಿನಗಳನ್ನು ಪೂರೈಸಿದ್ದಾರೆ.

ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ತೆರೆಕಂಡು ಅಭಿಮಾನಿಗಳು ಸಂಭ್ರಮಿಸುತ್ತಿದ್ದರೂ, ಅದನ್ನು ಖುದ್ದಾಗಿ ಕಣ್ತುಂಬಿಕೊಳ್ಳಲಾಗದೆ ನಟ ಜೈಲಿನಲ್ಲಿ ಕೊರಗುವಂತಾಯಿತು. ಪ್ರಸ್ತುತ ಅವರು ಹೊರಬರಲು ಕಾನೂನು ಸಮರ ತೀವ್ರಗೊಂಡಿದ್ದು, ಅವರಿಗೆ ಮತ್ತೆ ಜಾಮೀನು ದೊರೆಯಲಿದೆಯೇ ಅಥವಾ ಜೈಲುವಾಸ ಮುಂದುವರಿಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

Must Read