ದಿಗಂತ ವರದಿ ಬೆಳಗಾವಿ:
ರೇಣುಕಾ ಸ್ವಾಮಿ ಕೊಲೆ ಆರೋಪದ ಮೇಲೆ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಹಾಗೂ ಅವರ ಗ್ಯಾಂಗ್ ನ್ನು ಬೆಳಗಾವಿಯ ಹಿಂಡಲಗಾಕ್ಕೆ ಸಳ್ಥಾಂತರ ಮಾಡಲಾಗುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಗೆ ರಾಜ್ಯಾತಿಥ್ಯ ಕೊಟ್ಟಿರುವ ಕುರಿತು ವಿವಾದ ಭುಗಿಲೆದ್ದ ಹಿನ್ನೆಲೆಯಲ್ಲಿ ದರ್ಶನ್ ಮತ್ತು ಗ್ಯಾಂಗ್ ನ್ನು ಬೇರೆ ಜೈಲಿಗೆ ಶಿಫ್ಟ್ ಮಾಡಲು ಸಿಎಂ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಜೈಲು ಡಿಜಿ ಮಾಲಿನಿ ಕೃಷ್ಣಮೂರ್ತಿಯವರಿಂದ ಪ್ರಮುಖ ಜೈಲುಗಳ ಮಾಹಿತಿ ಸಂಗ್ರಹ ಮಾಡಿರುವ ಬಗ್ಗೆ ಮಾಹಿತಿಯಿದೆ.
ಇದರ ಮುಂದುವರೆದ ಭಾಗವಾಗಿ ಬೆಳಗಾವಿ ಹಿಂಡಲಗಾ ಜೈಲಿನಲ್ಲಿಯ ಬಂದೋಬಸ್ತ್ ವ್ಯವಸ್ಥೆ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ. ಈಗಾಗಲೇ ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಭೂಗತ ಪಾತಕಿ ಬನ್ನಂಜೆ ರಾಜಾ, ದಂಡುಪಾಳ್ಯ ಗ್ಯಾಂಗ್, ವೀರಪ್ಪನ್ ಸಹಚರರು, ಸೈನೈಡ್ ಮಲ್ಲಿಕಾ, ಬಳ್ಳಾರಿ ನಾಗಾ ಸೇರಿ ಹಲವರು ಸೆರೆವಾಸ ಅನುಭವಿಸುತ್ತಿದ್ದಾರೆ.
ಮರಣದಂಡನೆ ಶಿಕ್ಷೆಗೆ ಗುರಿಯಾದ ಕೈದಿಗಳು ಹಿಂಡಲಗಾ ಜೈಲಿನಲ್ಲಿದ್ದು, ಹಿಂಡಲಗಾ ಜೈಲಿಗೆ ದರ್ಶನ್ ಅಥವಾ ಗ್ಯಾಂಗ್ ಶಿಪ್ಟ್ ಮಾಡಿದರೆ ಆಗುವ ಸಾಧಕಬಾಧಕ ಕುರಿತು ಅಧಿಕಾರಿಗಳ ಮಟ್ಟದಲ್ಲಿ ಚರ್ಚೆ ನಡೆದಿದ್ದು, ಹಿಂಡಲಗಾ ಜೈಲಿನಲ್ಲಿಯ ಭದ್ರತೆ ಕುರಿತು ಮಾಲಿನಿ ಕೃಷ್ಣಮೂರ್ತಿ ಮಾಹಿತಿ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.