ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ದಿನಾಂಕ ನಿಗದಿಯಾಗಿದೆ. ಇದೇ ನವೆಂಬರ್ 24, 25ರಂದು ಸೌದಿ ಅರೇಬಿಯಾದ ಜಿದ್ದಾ ನಗರದಲ್ಲಿ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ.
ಈ ಬಾರಿಯ ಈ ವರ್ಷದ ಹರಾಜು ಮೆಗಾ ಹರಾಜಿನಲ್ಲಿ ರಿಷಬ್ ಪಂತ್, ಕೆಎಲ್ ರಾಹುಲ್, ಶ್ರೇಯಸ್ ಅಯ್ಯರ್ ಮತ್ತು ಅರ್ಷದೀಪ್ ಸಿಂಗ್ ಅವರಂತಹ ಭಾರತದ ಕ್ರಿಕೆಟ್ ತಾರೆಗಳನ್ನು ಸೆಳೆಯಲು ಫ್ರಾಂಚೈಸಿಗಳು ಪೈಪೋಟಿ ನಡೆಸಲಿವೆ.
2025 ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಎಲ್ಲಾ 10 ಐಪಿಎಲ್ ಫ್ರಾಂಚೈಸಿಗಳು ಅಕ್ಟೋಬರ್ 31 ರಂದು ತಮ್ಮ ಧಾರಣ ಪಟ್ಟಿಯನ್ನು ಬಿಡುಗಡೆ ಮಾಡಿದ್ದವು. ಇದರಲ್ಲಿ ಕೆಲವು ಫ್ರಾಂಚೈಸಿಗಳು ಬಿಸಿಸಿಐ ರೂಪಿಸಿದ್ದ ಧಾರಣ ನಿಯಮವನ್ನು ಸಂಪೂರ್ಣವಾಗಿ ಬಳಸಿಕೊಂಡಿದ್ದರೆ, ಇನ್ನು ಕೆಲವು ಫ್ರಾಂಚೈಸಿಗಳು ಕೆಲವೇ ಕೆಲವು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡು, ಉಳಿದವರನ್ನು ತಂಡದಿಂದ ಬಿಡುಗಡೆ ಮಾಡಿದ್ದವು. ಇದೀಗ ಆ ಎಲ್ಲಾ ಫ್ರಾಂಚೈಸಿಗಳ ಕಣ್ಣು ಮೆಗಾ ಹರಾಜಿನತ್ತ ನೆಟ್ಟಿದೆ.
ಯಾವ ಫ್ರಾಂಚೈಸಿ ಬಳಿ ಎಷ್ಟು ಹಣವಿದೆ?
ಐಪಿಎಲ್ 2025 ಕ್ಕೂ ಮುನ್ನ ಬಿಸಿಸಿಐ ಎಲ್ಲಾ ಫ್ರಾಂಚೈಸಿಗಳ ಪರ್ಸ್ ಗಾತ್ರವನ್ನು ಹೆಚ್ಚಿಸಿತ್ತು. ಈ ಹಿಂದೆ ಪ್ರತಿ ತಂಡವು 100 ಕೋಟಿ ರೂ. ಹರಾಜು ಮೊತ್ತದೊಂದಿಗೆ ಹರಾಜಿಗಿಳಿಯುತ್ತಿದ್ದವು. ಆದರೆ ಹೊಸ ನಿಯಮದ ಪ್ರಕಾರ ಈಗ ಫ್ರಾಂಚೈಸಿಗಳಿಗೆ 125 ಕೋಟಿ ರೂ. ಹರಾಜು ಮೊತ್ತ ಸಿಗಲಿದೆ.
ಪ್ರಸ್ತುತ ಪಂಜಾಬ್ ಕಿಂಗ್ಸ್ ಬಳಿ ಅಧಿಕ ಮೊತ್ತವಿದೆ. ಈ ಫ್ರಾಂಚೈಸಿ ಕೇವಲ ಇಬ್ಬರನ್ನು ಉಳಿಸಿಕೊಂಡಿದ್ದು, ಇದರ ಬಳಿ ಇನ್ನು 110.5 ರೂಪಾಯಿ ಹಣ ಉಳಿದಿದೆ. ಉಳಿದಂತೆ ಆರ್‌ಸಿಬಿ ಬಳಿ 83 ಕೋಟಿ , ಎಸ್‌ಆರ್‌ಎಚ್ ಬಳಿ 45 ಕೋಟಿ, ಎಲ್‌ಎಸ್‌ಜಿ ಬಳಿ 69 ಕೋಟಿ, ರಾಜಸ್ಥಾನ ಬಳಿ 79 ಕೋಟಿ, ಸಿಎಸ್‌ಕೆ ಬಳಿ 69 ಕೋಟಿ, ಡೆಲ್ಲಿ ಕ್ಯಾಪಿಟಲ್ಸ್ ಬಳಿ 73 ಕೋಟಿ ರೂ. ಹಣವಿದೆ.
ಈಗಾಗಲೇ 10 ಫ್ರಾಂಚೈಸಿಗಳು ರಿಟೈನ್ ಮಾಡಿಕೊಂಡಿವೆ. 10 ತಂಡಗಳು ಒಟ್ಟು 46 ಆಟಗಾರರನ್ನು ರಿಟೈನ್ ಮಾಡಿಕೊಂಡಿವೆ. ಇನ್ನುಳಿದಂತೆ 204 ಆಟಗಾರರು ಈಗ ಹರಾಜಿನಲ್ಲಿದ್ದು, ಈ ಪೈಕಿ 70 ವಿದೇಶಿ ಆಟಗಾರರು ಇದ್ದಾರೆ.