ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿಯಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಚರ್ಚೆ ಮಾಡಿ ಈಗಾಗಲೇ ಸಿದ್ದರಾಮಯ್ಯನವರ ರಾಜೀನಾಮೆಯ ಮುಹೂರ್ತ ನಿಗದಿ ಮಾಡಿದ್ದಾರೆ.ಆ ಮುಹೂರ್ತ ಯಾವುದೆಂದು ಸಿದ್ದರಾಮಯ್ಯನವರೇ ಬಾಯಿ ಬಿಡಬೇಕಿದೆ ಎಂದು ತಿಳಿಸಿದರು.
ಸಿದ್ದರಾಮಯ್ಯನವರು ಪೂರ್ಣ ಅವಧಿ ಪೂರೈಸುವುದಿಲ್ಲ, ಅತಿ ಶೀಘ್ರವೇ ರಾಜೀನಾಮೆ ಕೊಡುತ್ತಾರೆ ಎಂದ ಅವರು, 5 ವರ್ಷ ಕಾಲ ಸಿಎಂ ಆಗಿರುವುದಾಗಿ ರಾಜ್ಯದ ಜನರಿಗೆ ಸಿದ್ದರಾಮಯ್ಯನವರು ಹೇಳಲಿ ನೋಡೋಣ ಎಂದು ಸವಾಲು ಹಾಕಿದರು.
ಮುಖ್ಯಮಂತ್ರಿಗಳು ಮತ್ತವರ ಕುಟುಂಬ ಆರೋಪಿ ಸ್ಥಾನದಲ್ಲಿ ನಿಂತಿದೆ. ಭ್ರಷ್ಟಾಚಾರದ ಸಂಬಂಧ ರಾಜ್ಯದ ಜನತೆಗೆ ಅವರು ಉತ್ತರ ಕೊಡಬೇಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಲೋಕಾಯುಕ್ತ ನೋಟಿಸ್ ಕೊಟ್ಟು ತನಿಖೆಗೆ ಬರಲು ತಿಳಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಯಾಗಿ ತನಿಖೆ ಎದುರಿಸುತ್ತೀರಾ? ಆರೋಪಿಯಾಗಿ ಹೋಗುವಿರಾ? ಎಂಬುದನ್ನು ಜನತೆಗೆ ತಿಳಿಸಿ ಎಂದು ಒತ್ತಾಯಿಸಿದರು.
ಒಂದು ಕಡೆ ವಾಲ್ಮೀಕಿ ನಿಗಮದ ಹಗರಣ, ಇನ್ನೊಂದೆಡೆ ಮೈಸೂರಿನ ಮುಡಾ ಹಗರಣ, ಮತ್ತೊಂದೆಡೆ ಒಬ್ಬ ಬೇಜವಾಬ್ದಾರಿ ಸಚಿವ ಜಮೀರ್ ಅಹಮದ್ ಅವರನ್ನು ಹಿಡಿದುಕೊಂಡು ವಕ್ಫ್ ಬೋರ್ಡಿಗೆ ರೈತರ ಜಮೀನು ಕೊಡುಯುತ್ತಿದ್ದಾರೆ. ಮಠ ಮಾನ್ಯಗಳ ಜಮೀನು ಕಸಿಯುವ ಪ್ರಯತ್ನ ನಡೆದಿದೆ. ಜಮೀರ್ ಅಹಮದ್ ಷಡ್ಯಂತ್ರದ ಹಿಂದೆ ಮುಖ್ಯಮಂತ್ರಿಗಳ ಕುಮ್ಮಕ್ಕು ಇದೆ ಎಂದು ವಿಜಯೇಂದ್ರ ಅವರು ಆರೋಪಿಸಿದರು.