ಹಿಂದು ವ್ಯಕ್ತಿಯ ಸ್ವಯಾರ್ಜಿತ ಆಸ್ತಿಗಳಿಗೆಉತ್ತರಾಧಿಕಾರಿಯಾಗಲು ಹೆಣ್ಣು ಮಕ್ಕಳು ಅರ್ಹರು: ಸುಪ್ರೀಂ ಕೋರ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಹಿಂದು ವ್ಯಕ್ತಿಯ ಸ್ವಯಾರ್ಜಿತ ಮತ್ತು ಇತರೆ ಆಸ್ತಿಗಳಿಗೆ ಹೆಣ್ಣು ಮಕ್ಕಳು ಉತ್ತರಾಧಿಕಾರಿಯಾಗಲು ಅರ್ಹರಾಗಿರುತ್ತಾರೆ ಎಂದು ಆದೇಶ ನೀಡಿದೆ.

ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ವಿಭಾಗೀಯ ಪೀಠ, ಹಿಂದು ಉತ್ತರಾಧಿಕಾರ ಕಾಯ್ದೆಯಡಿಯಲ್ಲಿ ಹಿಂದು ಮಹಿಳೆಯರು ಮತ್ತು ವಿಧವೆಯರ ಆಸ್ತಿ ಹಕ್ಕುಗಳ ಅಡಿಯಲ್ಲಿ ಆದೇಶ ನೀಡಿದ್ದಾರೆ.

ಹಿಂದು ಮಹಿಳೆಯು ತನ್ನ ಪಾಲಿನ ಆಸ್ತಿಯನ್ನು ಉಯಿಲು (ವಿಲ್) ಮಾಡದೇ ಸತ್ತರೆ ಆಕೆ ತನ್ನ ತಂದೆ ಅಥವಾ ತಾಯಿಯಿಂದ ಪಡೆದುಕೊಂಡಿರುವ ಆಸ್ತಿಯು ಆಕೆಯ ತಂದೆಯ ವಾರಸುದಾರರಿಗೆ ಮರಳುತ್ತದೆ, ಒಂದು ವೇಳೆ ಆ ಆಸ್ತಿಯ ಗಂಡ ಅಥವಾ ಗಂಡನ ತಂದೆಯಿಂದ ಪಡೆದುಕೊಂಡಿದ್ದರೆ ಆ ಆಸ್ತಿಯು ಗಂಡನ ಉತ್ತರಾಧಿಕಾರಿಗಳಿಗೆ ಮರಳುತ್ತದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ.(ಇಲ್ಲಿ ತಂದೆಯ ವಾರಸುದಾರರು ಎಂದರೆ ತಂದೆಯ ಪುತ್ರಿಯರು, ಪತ್ನಿ, ತಾಯಿ, ಮೃತ ಪುತ್ರನ ಪುತ್ರರು, ಮೃತ ಪುತ್ರನ ಪುತ್ರಿಯರು, ಮೃತ ಪುತ್ರಿಯ ಪುತ್ರಿಯರು. ಹಾಗೆಯೇ ಪತಿಯ ವಾರಸುದಾರರು ಎಂದರೆ ಅವರ ಪುತ್ರ, ಪುತ್ರಿ, ತಾಯಿ ಹಾಗೂ ಮೊಮ್ಮಕ್ಕಳು)

ವಿಲ್‌ ಬರೆಯದೆ ಸಾಯುವ ಹಿಂದು ವ್ಯಕ್ತಿಯ ಸ್ವಯಾರ್ಜಿತ ಹಾಗೂ ವಿಭಜನೆಯಿಂದ ಬಂದ ಆಸ್ತಿಗಳು ಹೆಣ್ಣುಮಕ್ಕಳಿಗೆ ಆನುವಂಶಿಕವಾಗಿ ಸಿಗಬೇಕಾಗುತ್ತದೆ ಮತ್ತು ಅವರು ಕುಟುಂಬದ ಇತರ ಸದಸ್ಯರಿಗಿಂತ ಹೆಚ್ಚಿನ ಆದ್ಯತೆ ಪಡೆಯಲಿದ್ದಾರೆ. ಇದರ ಅರ್ಥ, ಒಂದು ವೇಳೆ ಹಿಂದು ಪುರುಷ ವಿಲ್‌ ಬರೆದಿಡದೆ ಮೃತಪಟ್ಟರೆ, ಆತನ ಸ್ವಯಾರ್ಜಿತ ಆಸ್ತಿ, ಜಂಟಿ ಮಾಲೀಕತ್ವ ಅಥವಾ ಕೌಟುಂಬಿಕ ಆಸ್ತಿಯ ವಿಭಜನೆಯಿಂದ ಪಡೆದುಕೊಂಡ ಆಸ್ತಿಯನ್ನು ಹಾಗೆಯೇ ವಂಶಪಾರಂಪರ್ಯವಾಗಿ ಹಂಚಿಕೆ ಮಾಡಲಾಗುತ್ತದೆಯೇ ವಿನಾ, ಉಳಿಯುವಿಕೆಯ ಆಧಾರದಲ್ಲಿ ಅಲ್ಲ. ಅಂತಹ ಹಿಂದು ಪುರುಷರ ಹೆಣ್ಣುಮಕ್ಕಳು ಕುಟುಂಬದ ಇತರ ಸದಸ್ಯರಿಗಿಂತ (ಮೃತ ತಂದೆಯ ಸಹೋದರರ ಗಂಡುಮಕ್ಕಳು ಅಥವಾ ಹೆಣ್ಣುಮಕ್ಕಳು) ಆ ಆಸ್ತಿಯನ್ನು ಆನುವಂಶಿಕವಾಗಿ ಪಡೆದುಕೊಳ್ಳಲು ಅರ್ಹತೆ ಪಡೆದಿರುತ್ತಾರೆ ಎಂದು ಕೋರ್ಟ್‌ ಹೇಳಿದೆ.

ಹಿಂದು ಉತ್ತರಾಧಿಕಾರ ಕಾಯ್ದೆಯ ಮುಖ್ಯ ಉದ್ದೇಶವು, ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಪುರುಷ ಮತ್ತು ಸ್ತ್ರೀಯರ ನಡುವೆ ಸಂಪೂರ್ಣ ಸಮಾನತೆಯನ್ನು ಸ್ಥಾಪಿಸುವುದು ಆಗಿದೆ ನ್ಯಾಯಮೂರ್ತಿಗಳು ಹೇಳಿದರು.

ಉಯಿಲು ಇಲ್ಲದೆ ಮರಣ ಹೊಂದಿದ ತಂದೆಯ ಮರಣದ ನಂತರ ಅಂತಹ ಆಸ್ತಿಯು ಉತ್ತರಾಧಿಕಾರವಾಗಿ ಮಗಳಿಗೆ ಅಥವಾ ತಂದೆಯ ಸಹೋದರನಿಗೆ ಹಂಚಿಕೆಯಾಗುತ್ತದೆಯೇ ಎಂಬ ಪ್ರಶ್ನೆಗೆ ಸ್ಪಷ್ಟನೆ ನೀಡಿದೆ.
ವಿಧವೆ ಅಥವಾ ಮಗಳು ಸ್ವಯಂ-ಸ್ವಾಧೀನಪಡಿಸಿಕೊಂಡ ಆಸ್ತಿ ಅಥವಾ ಮೃತಪಟ್ಟ ಹಿಂದುವ್ಯಕ್ತಿಯ ಪುತ್ರಿ ಆಸ್ತಿಯ ವಿಭಜನೆಯಲ್ಲಿ ಪಡೆದ ಪಾಲಿಗೆ ಉತ್ತರಾಧಿಕಾರ ಪಡೆಯುವ ಹಕ್ಕನ್ನು ಹಳೆಯ ಸಾಂಪ್ರದಾಯಿಕ ಹಿಂದು ಕಾನೂನಿನಲ್ಲಿ ಇದೆ. ಮಾತ್ರವಲ್ಲದೆ ವಿವಿಧ ನ್ಯಾಯಾಂಗ ತೀರ್ಪುಗಳಿಂದಲೂ ಇದನ್ನು ಗುರುತಿಸಲಾಗಿದೆ ಎಂದು ಹೇಳಿದ್ದಾರೆ

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!