ದಾವಣಗೆರೆ ರಸ್ತೆ ಅಪಘಾತದಲ್ಲಿ ಮೃತಪಟ್ಟ ಮಹಿಳೆಯಿಂದ 6 ಮಂದಿಗೆ ಪುನರ್ಜನ್ಮ!

ಹೊಸದಿಗಂತ ಡಿಜಿಟಲ್ ಡೆಸ್ಕ್

ಮಣಿಪಾಲ: ದಾವಣಗೆರೆ ಬಳಿ ಗುಡಾಲು ಗ್ರಾಮದ ಗುಮ್ಮನೂರು ರಸ್ತೆಯಲ್ಲಿ ಜ. 22ರಂದು ಸಂಜೆ 4 ಗಂಟೆ ಸುಮಾರಿಗೆ ರಸ್ತೆ ಅಪಘಾತ ಸಂಭವಿಸಿತ್ತು. ತೀವ್ರತರವಾದ ಗಾಯಗೊಂಡ ಇಂದ್ರಮ್ಮ ಬಿ.ಎಂ. (57) ಹೆಚ್ಚಿನ ಚಿಕಿತ್ಸೆಗಾಗಿ ಜ. 23ರಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಮೆದುಳು ನಿಷ್ಕ್ರಿಯಗೊಂಡ ಅವರ ಹೃದಯ/ಹೃದಯ ಕವಾಟಗಳು, ಯಕೃತ್ತು, ಎರಡು ಮೂತ್ರಪಿಂಡಗಳು ಮತ್ತು ಎರಡು ಕಾರ್ನಿಯಾಗಳು 6 ಜನರ ಜೀವ ಉಳಿಸಲು ಸಹಾಯವಾಗಿದೆ.

ಆಸ್ಪತ್ರೆಯ ವೈದ್ಯರು ಇಂದ್ರಮ್ಮ ಅವರನ್ನು ಉಳಿಸಲು ಪ್ರಯತ್ನಿಸಿದರೂ ಅವರು ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಕಂಡುಬರಲಿಲ್ಲ. ಇಂದ್ರಮ್ಮ ಅವರನ್ನು 6 ತಾಸುಗಳ ಅಂತರದಲ್ಲಿ ಎರಡು ಬಾರಿ ಪರಿಶೀಲಿಸಿ, ಅಧಿಕೃತವಾಗಿ ವೈದ್ಯರು ರೋಗಿಯ ಮೆದುಳು ನಿಷ್ಕ್ರಿಯಗೊಂಡಿದೆ ಎಂದು ಘೋಷಿಸಿದರು. ಇಂದ್ರಮ್ಮ ಅವರ ಪತಿ ನಂಜುಂಡಪ್ಪ ಎಚ್.ಎನ್. ಅವರು ಪತ್ನಿಯ ಅಂಗಗಳನ್ನು ದಾನ ಮಾಡಲು ತಮ್ಮ ಇಚ್ಛೆ ವ್ಯಕ್ತಪಡಿಸಿದರು.

ಜೀವನಸಾರ್ಥಕತೆ ಪ್ರೋಟೋಕಾಲ್‌ಗಳು ಮತ್ತು ನಿರ್ಧಾರಗಳ ಪ್ರಕಾರ, ನೋಂದಾಯಿತ ರೋಗಿಗಳಿಗೆ ಎರಡು ಕಾರ್ನಿಯಾಗಳು ಮತ್ತು ಒಂದು ಮೂತ್ರಪಿಂಡವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬಳಸಲಾಯಿತು. ಒಂದು ಮೂತ್ರಪಿಂಡವನ್ನು ಮಂಗಳೂರಿನ ಯೆನೆಪೊಯ ಆಸ್ಪತ್ರೆಗೆ, ಹೃದಯ/ಹೃದಯ ಕವಾಟವನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಯ ರೋಗಿಗಳಿಗೆ ಕಳುಹಿಸಿಕೊಡಲಾಯಿತು.

ಮೃತ ಇಂದ್ರಮ್ಮ ಅವರ ಪತಿ ನಂಜುಂಡಪ್ಪ ಅವರು, ಅಂಗದಾನ ಒಂದು ಪುಣ್ಯದ ಕೆಲಸ. ನನ್ನ ಪತ್ನಿ ಅಂಗದಾನ ಮಾಡಿ ತನ್ನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾಳೆ ಎಂದು ತಿಳಿಸಿದ್ದಾರೆ.

ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಜೀವ ಉಳಿಸುವ ನಿಟ್ಟಿನಲ್ಲಿ ಅಂಗದಾನ ಶ್ರೇಷ್ಟವಾದ ಕೆಲಸವಾಗಿದ್ದು, ಅತ್ಯಂತ ಮಹತ್ವ ಪಡೆದಿದೆ. ಜನರು ಈ ರೀತಿಯ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹಿಸಬೇಕು ಎಂದು ತಿಳಿಸಿ, ಅಂಗ ದಾನ ಮಾಡಲು ನಿರ್ಧರಿಸಿದ ಇಂದ್ರಮ್ಮ ಕುಟುಂಬಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ದಾನ ಮಾಡಿದ ಅಂಗಗಳನ್ನು ಹಸಿರು ಪಥದಲ್ಲಿ (ಗ್ರೀನ್ ಕಾರಿಡಾರ್) ಮಣಿಪಾಲದಿಂದ ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಉಡುಪಿಯ ಪೊಲೀಸ್ ಇಲಾಖೆಯವರ ಸಹಯೋಗದೊಂದಿಗೆ ಚೆನ್ನೈಗೆ ವರ್ಗಾಯಿಸಲಾಯಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!