ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಡ ಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಗಜಪಡೆ ಸಿದ್ಧವಾಗಿವೆ. ಇದೀಗ ಆನ್ಲೈನ್ ಮೂಲಕ ದಸರಾ ಗೋಲ್ಡ್ ಕಾರ್ಡ್ ಹಾಗೂ ಟಿಕೆಟ್ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲರಿಗೂ ಸಿಗಲಿ ಎಂಬ ಉದ್ದೇಶದಿಂದ 5 ದಿನಗಳ ಕಾಲ ಅಂದರೆ ಸೆಪ್ಟೆಂಬರ್ 26 ರಿಂದ 30 ರವರೆಗೂ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗಿದೆ.
ಪ್ರತಿನಿತ್ಯ 1000 ದಿಂದ 1500 ಗೋಲ್ಡ್ ಕಾರ್ಡ್ಗಳು ಮಾರಾಟ ಮಾಡಲಿದ್ದು, ಒಂದು ‘ದಸರಾ ಗೋಲ್ಡ್ ಕಾರ್ಡ್’ಗೆ 6500 ರೂ. ನಿಗದಿ ಪಡಿಸಲಾಗಿದೆ. ಒಂದು ದಸರಾ ಗೋಲ್ಡ್ ಕಾರ್ಡ್ನಲ್ಲಿ ಒಬ್ಬರು ಜಂಬೂಸವಾರಿ ಮೆರವಣಿಗೆ, ಪಂಜಿನ ಕವಾಯತು, ಚಾಮುಂಡಿ ಬೆಟ್ಟ, ಅರಮನೆ, ಚಾಮರಾಜೇಂದ್ರ ಮೃಗಾಲಯ ವೀಕ್ಷಣೆಗೆ ಅವಕಾಶ ನೀಡಲಾಗಿದೆ.
ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ ಟಿಕೆಟ್ ದರ 3500 ರೂ., ಪಂಜಿನ ಕವಾಯತು ವೀಕ್ಷಣೆಗೆ ಟಿಕೆಟ್ ದರ 1000 ರೂ. ನಿಗದಿ ಮಾಡಲಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹಾದೇವಪ್ಪ ಮಾಹಿತಿ ನೀಡಿದ್ದಾರೆ.
ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2024ಕ್ಕೆ ಈ ಬಾರಿ 21 ದಿನಗಳ ಕಾಲ ವಿದ್ಯುತ್ ದೀಪಾಲಂಕಾರ ಇರಲಿದ್ದು, ದಸರಾ ಬಳಿಕವೂ ನಗರದ ಸುತ್ತಮುತ್ತ 130 ಕಿಮೀ 10 ದಿನ ದೀಪಾಲಂಕಾರ ವಿಸ್ತರಣೆ ಮಾಡಲಾಗುತ್ತಿದೆ ಎಂದು ವಿದ್ಯುತ್ ದೀಪಾಲಂಕಾರ ಸಮಿತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ. ಜಂಬೂಸವಾರಿಗೆ ವಿದ್ಯುತ್ ರಥ ಸ್ಥಬ್ಧಚಿತ್ರ ಮೆರವಣಿಗೆ, ಅಕ್ಟೊಬರ್ 6, 7, 11, 12ರಂದು ಪಂಜಿನ ಕವಾಯತು ಮೈದಾನದಲ್ಲಿ ಡ್ರೋನ್ ಶೋ ನಡೆಯಲಿದೆ.
ಈ ಬಾರಿ ಎಂಟು ದಿನಗಳ ಕಾಲ ಯುವ ಸಂಭ್ರಮ ಆಯೋಜನೆ
ಮಾನಸಗಂಗೋತ್ರಿಯ ಬಯಲು ರಂಗಂಮದಿರದಲ್ಲಿ ಯುವ ಸಂಭ್ರಮ ಅನಾವರಣಗೊಳ್ಳಲಿದೆ. ಸೆಪ್ಟೆಂಬರ್ 24 ರಿಂದ ಅಕ್ಟೋಬರ್ 1ರವರೆಗೆ ಯುವ ಸಂಭ್ರಮ ನಡೆಯಲಿದ್ದು, ಸೆಪ್ಟೆಂಬರ್ 24 ರಂದು ಸ್ಯಾಂಡಲ್‌ವುಡ್ ಖ್ಯಾತ ನಟ ಶ್ರೀಮುರುಳಿ ಮತ್ತು ನಟಿ ರುಕ್ಮಿಣಿ ವಸಂತ್ ಯುವ ಸಂಭ್ರಮದ ಉದ್ಘಾಟನೆ ಮಾಡಲಿದ್ದಾರೆ.
ಯುವ ಸಂಭ್ರಮದಲ್ಲಿ ಭಾಗಿಯಾಗಲು 470 ಕಾಲೇಜುಗಳ ವಿದ್ಯಾರ್ಥಿಗಳು ಮುಂದೆ ಬಂದಿದ್ದಾರೆ. ಈ ಮೊದಲು ಏಳು ದಿನಗಳ ಕಾಲ ಯುವ ಸಂಭ್ರಮ ಆಯೋಜಿಸಲು ಚಿಂತಿಸಲಾಗಿತ್ತು. 7 ದಿನಗಳ ಕಾಲ ನಡೆದರೆ 350 ಕಾಲೇಜುಗಳ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ಸಿಗಲಿದೆ. ಹಾಗಾಗಿ ಎಲ್ಲಾ ಕಾಲೇಜುಗಳಿಗೂ ಅವಕಾಶ ಸಿಗಲೆಂದು ಒಂದು ದಿನ ವಿಸ್ತರಣೆ ಮಾಡಲಿದ್ದು, ಎಂಟು ದಿನ ಯುವ ಸಂಭ್ರಮ ಆಯೋಜಿಸಲಾಗಿದೆ ಎಂದು ಸಚಿವ ಡಾ ಎಚ್ ಸಿ ಮಹದೇವಪ್ಪ ಮಾಹಿತಿ ನಿಡಿದ್ದಾರೆ.