Tuesday, February 27, 2024

ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದ್ದೇ ದಯಾನಂದ ಸರಸ್ವತಿಯವರು : ಡಾ. ರೋಹಿಣಾಕ್ಷ ಶಿರ್ಲಾಲು

ಹೊಸದಿಗಂತ ವರದಿ ಬೆಂಗಳೂರು: 

ಸಾಮಾಜಿಕ ಅಸ್ಥಿರತೆಯನ್ನು ಹೋಗಲಾಡಿಸಿ ಚೈತನ್ಯ ನೀಡಬೇಕಾದುದು ಕಾಲಘಟ್ಟಗಳ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟದ ಜೊತೆ-ಜೊತೆಗೆ ಸಾಮಾಜಿಕ ಸುಧಾರಣೆಯ ತುರ್ತು ಮನಗಂಡು, ಪರಕೀಯರ ಧಾಳಿ, ಅಸ್ಮಿತೆಗೆ ಬಂದೊದಗಿದ ಕೇಡಿನ ನಿವಾರಣೆಗೆ ಸ್ವಾಮಿ ದಯಾನಂದ ಸರಸ್ವತಿಯರಂತಹ ನವೋತ್ಥಾನ ಸಾರಥಿಗಳು ನೀಡಿದ ಕೊಡುಗೆ ಮಹತ್ತರವಾದುದು ಎಂದು ಕಲಬುರಗಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ, ಲೇಖಕ, ಡಾ. ರೋಹಿಣಾಕ್ಷ ಶಿರ್ಲಾಲು ಅಭಿಪ್ರಾಯ ವ್ಯಕ್ತಪಡಿಸಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬೆಂಗಳೂರಿನ ರಾಷ್ಟ್ರೋತ್ಥಾನ ಪರಿಷತ್‍ನ ಸಾಹಿತ್ಯ ವಿಭಾಗ ಕೆಂಪೇಗೌಡ ನಗರದಲ್ಲಿರುವ ‘ಕೇಶವಶಿಲ್ಪ’ ಸಭಾಂಗಣದಲ್ಲಿ ಆಯೋಜಿಸಿರುವ ಒಂದು ತಿಂಗಳ ಕನ್ನಡ ಪುಸ್ತಕ ಪ್ರದರ್ಶನ ಮತ್ತು ಮಾರಾಟದ ‘3ನೆಯ ಕನ್ನಡ ಪುಸ್ತಕ ಹಬ್ಬ’ದ ಭಾಗವಾಗಿ ಈ ದಿನ ಬೆಳಗ್ಗೆ ಆಯೋಜಿಸಿದ್ದ ‘ನವೋತ್ಥಾನ ಅಧ್ವರ್ಯು ಸ್ವಾಮಿ ದಯಾನಂದ ಸರಸ್ವತಿ’ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

ಭಾರತೀಯ ಧಾರ್ಮಿಕ ಮುಖಂಡರಾಗಿ ಮತ್ತು ವೇದ ಧರ್ಮದ ಹಿಂದೂ ಸುಧಾರಣಾ ಚಳವಳಿಯ ಆರ್ಯ ಸಮಾಜದ ಸ್ಥಾಪಕರಾಗಿ ಸ್ವಾಮಿ ದಯಾನಂದ ಸರಸ್ವತಿಗಳು ಕೈಗೊಂಡ ಸುಧಾರಣೆಗಳು ವಿಶಿಷ್ಟವಾದುದು. ಅವರು ವೈದಿಕ ಸಿದ್ಧಾಂತ ಮತ್ತು ಸಂಸ್ಕೃತ ಭಾಷೆಯ ಪ್ರಖ್ಯಾತ ವಿದ್ವಾಂಸರಾಗಿ, 1876ರಲ್ಲಿ ಸ್ವರಾಜ್ಯಕ್ಕಾಗಿ “ಇಂಡಿಯಾ ಫಾರ್ ಇಂಡಿಯನ್ಸ್” ಎಂಬ ಕರೆ ಕೊಟ್ಟರು. ಆ ಸಮಯದಲ್ಲಿ ಹಿಂದೂ ಧರ್ಮದಲ್ಲಿ ಧಾರ್ಮಿಕ ಕ್ರಿಯೆಗಳು ಮೂರ್ತಿಪೂಜೆ, ಅಥವಾ ಮೂರ್ತಿ ಆರಾಧನೆಯನ್ನು ನಿರಾಕರಿಸಿ ತೆಗಳಿದ ಅವರು ವೈದಿಕ ಸಿದ್ಧಾಂತಗಳನ್ನು ಪುನರುಜ್ಜೀವನಗೊಳಿಸುವ ಕಡೆಗೆ ಕೆಲಸ ಮಾಡಿದರು. ದಯಾನಂದ ಸರಸ್ವತಿಯವರು ವೇದಗಳ ಅಧಾರದ ಮೇಲೆ ಹಿಂದು ಸಮಾಜವನ್ನು ಶುದ್ಧೀಕರಿಸಲು ಪ್ರಯತ್ನಿಸಿದ ಮೊದಲ ತತ್ವಜ್ಞಾನಿಯಾಗಿ ಉಲ್ಲೇಖಿಸಲಾಗಿದೆ. ತಮ್ಮ ಪ್ರಸಿದ್ದ ಕೃತಿಯಾದ ಸತ್ಯಾರ್ಥ ಪ್ರಕಾಶದಲ್ಲಿ ‘ವೇದಗಳಿಗೆ ಹಿಂತಿರುಗಿ’ ಎಂದು ಕರೆಕೊಟ್ಟರು. ಸ್ವರಾಜ್ಯ ಎಂಬ ಪದವನ್ನು ಮೊದಲ ಬಾರಿಗೆ ಬಳಸಿದ ಹಿರಿಮೆ ದಯಾನಂದ ಸರಸ್ವತಿಯವರಗೆ ಸಲ್ಲುತ್ತದೆ ಎಂದು ಡಾ. ರೋಹಿಣಾಕ್ಷ ಶಿರ್ಲಾಲು ತಿಳಿಸಿದರು.

ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರ ಹೊಂದಿದ್ದ ಹಿಂದುಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಕರೆತರಲು ಶುದ್ಧಿ ಚಳುವಳಿಯನ್ನು ಆರಂಭಿಸಿದರು, ಇವರು ವೈದಿಕ ಧರ್ಮದ ರಕ್ಷಣೆ ಮತ್ತು ಪ್ರಚಾರ ಮಾಡಿದ್ದರಿಂದ ಇವರನ್ನು ಆಧುನಿಕ ಭಾರತದ ಹಿಂದೂ ಧರ್ಮದ ಪ್ರಥಮ ಸುಧಾರಕ ಎಂದು ಕರೆಯಲಾಗಿದೆ. ಆರ್ಯ ಸಮಾಜವು ವಿವಿಧ ಸಾಮಾಜಿಕ ಅನಿಷ್ಟಗಳನ್ನು ವಿರೋಧಿಸುವ ಮೂಲಕ ಹಿಂದೂ ಸಮಾಜಕ್ಕೆ ಅಮೂಲ್ಯವಾದ ಸೇವೆಗಳನ್ನು ನೀಡಿತು. ಅವರು ಅಸ್ಪೃಶ್ಯತೆ ಆಚರಣೆಯ ವಿರುದ್ಧ ಧ್ವನಿಯೆತ್ತಿದ್ದರು. ಅವರು ಸ್ತ್ರೀ ಶಿಕ್ಷಣವನ್ನು ಪ್ರತಿಪಾದಿಸಿದರು ಮತ್ತು ಮಹಿಳೆಯರ ಅನ್ಯಾಯದ ವಿರುದ್ಧ ಪ್ರತಿಭಟಿಸಿದರು. ಅವರು ಬಾಲ್ಯವಿವಾಹಗಳು, ಬಹುಪತ್ನಿತ್ವ, ಪರ್ದಾ ಮತ್ತು ಇತರ ವಿಷಯಗಳ ಜೊತೆಗೆ ‘ ಸತಿ’ ಪದ್ಧತಿಯನ್ನು ಕಟುವಾಗಿ ವಿರೋಧಿಸಿದರು. ವೈದಿಕ ಬೋಧನೆಗಳನ್ನು ಉಲ್ಲೇಖಿಸಿ ಅವರು ಪುರುಷರೊಂದಿಗೆ ಮಹಿಳೆಯರೂ ಸಮಾನ ಹಕ್ಕುಗಳನ್ನು ಹೊಂದಬೇಕೆಂದು ಅವರು ಬೊಟ್ಟುಮಾಡಿದ್ದರು. ಆರ್ಯ ಸಮಾಜದ ಸದಸ್ಯರು ಅಂತರ್ಜಾತಿ ವಿವಾಹಗಳು ಮತ್ತು ವಿಧವಾ ವಿವಾಹಗಳ ಮೂಲಕ ನವೀನತೆಯನ್ನು ತರುವಲ್ಲಿ ಪರಿಶ್ರಮಿಸಿತು. ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆಗಳು ಹಿಂದೂ ಧರ್ಮ ಮತ್ತು ಸಮಾಜವನ್ನು ಸಂರಕ್ಷಿಸುವುದರ ಜೊತೆಗೆ ಆಧುನಿಕ ವೈಜ್ಞಾನಿಕ ಸಾಲಿನಲ್ಲಿ ಜ್ಞಾನ ಮತ್ತು ಶಿಕ್ಷಣದ ಪ್ರಗತಿಯನ್ನು ಉತ್ತೇಜಿಸುವಲ್ಲಿ ಸಾಫಲ್ಯಕಂಡಿತು ಎಂದು ವಿಶ್ಲೇಶಿಸಿದರು.

ರಾಷ್ಟ್ರೀಯ ಪ್ರಜ್ಞೆಯ ಪ್ರಗತಿಗೆ ಪರೋಕ್ಷವಾಗಿ ಕೊಡುಗೆ ನೀಡಿದ ದಯಾನಂದ ಸರಸ್ವತಿಗಳು ವಿದೇಶೀ ವಸ್ತುಗಳ ನಿರಾಕರಣೆಯನ್ನು ಮೊದಲು ಪ್ರತಿಪಾದಿಸಿದರು. ಭಾರತದ ಬೇರೆಲ್ಲ ರಾಷ್ಟ್ರೀಯ ನಾಯಕರಿಗಿಂತ ಮೊದಲು ವೈದಿಕ ತತ್ವಗಳ ಮೇಲೆ ಸ್ಥಾಪಿಸಲಾದ ರಾಜ್ಯವನ್ನು ಉಲ್ಲೇಖಿಸಲು ಅವರು ‘ಸ್ವರಾಜ್’ ಎಂಬ ಪದವನ್ನು ಸಹ ಸೃಷ್ಟಿಸಿದರು. ಇಂತಹ ಚಳುವಳಿಗಳಿಂದ ಸ್ವಾತಂತ್ರ್ಯಪೂರ್ವ ಭಾರತದಲ್ಲಿ ಸಾಮಾಜಿಕ-ಧಾರ್ಮಿಕ ಬದಲಾವಣೆಗಳನ್ನು ತರುವಲ್ಲಿ ದಯಾನಂದ ಸರಸ್ವತಿಗಳ ಆರ್ಯ ಸಮಾಜ ಪ್ರಮುಖ ಪಾತ್ರ ವಹಿಸಿತ್ತು ಎಂದು ಅಭಿಪ್ರಾಯಪಟ್ಟರು. ಅವರು ಸಂಪ್ರದಾಯವಾದಿ ಮತ್ತು ಪಂಥೀಯ ಕಾರ್ಯಕರ್ತ ಎಂದು ಟೀಕಿಸಲ್ಪಟ್ಟಿದ್ದರೂ, ಅವರು ಇತರ ಎಲ್ಲ ಧರ್ಮಗಳಿಗಿಂತ ಹಿಂದೂ ಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸಿದರು, ಅವರು ಆಧುನಿಕ ಭಾರತದ ವಾಸ್ತುಶಿಲ್ಪಿಗಳಲ್ಲಿ ಒಬ್ಬರು. ಗಾಯತ್ರೀ ಮಂತ್ರವನ್ನುಎಲ್ಲೆಡೆ ಸಮಗ್ರವಾಗಿ ಬಳಸಲು ಜಾತಿ-ಪಂಥ, ಲಿಂಗಭೇದಗಳಿಲ್ಲದೇ ಅಹರ್ನಿಶಿ ಪ್ರಯತ್ನಿಸಿದರು ಎಂದು ರೋಹಿಣಾಕ್ಷರು ನೆನಪಿಸಿಕೊಂಡರು.

ರಾಷ್ಟ್ರೋತ್ಥಾನ ಸಾಹಿತ್ಯದ ಪ್ರಬಂಧಕ ಶ್ರೀ ಮೋಹನ್ ಅವರು ಡಾ. ರೋಹಿಣಾಕ್ಷ ಶಿರ್ಲಾಲು ಅವರನ್ನು ನೆನಪಿನ ಸ್ಮರಣಿಕೆ ನೀಡಿ ಅಭಿನಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!