Monday, July 4, 2022

Latest Posts

ಡೆಲ್ಲಿ- ಹೈದರಾಬಾದ್‌ ನಡುವೆ ಇಂದು ರೋಚಕ ಕದನ; ಸೋತವರ ಪ್ಲೇ‌ ಆಫ್‌ ಕನಸು ಭಗ್ನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಪ್ಲೇ ಆಫ್‌ ಅಭಿಯಾನವನ್ನು ಜೀವಂತವಾಗಿಡಲು ಗೆಲ್ಲಲೇಬೇಕಾದ ಒತ್ತಡದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಇಂದು ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗುತ್ತಿವೆ.
ಈ ವರ್ಷದ ಐಪಿಎಲ್‌ ನಲ್ಲಿ ಡೆಲ್ಲಿ ತಂಡದ ಪ್ರದರ್ಶನ ಅಷ್ಟೇನು ಉತ್ತಮವಾಗಿಲ್ಲ. ಆಡಿರುವ ಒಂಬತ್ತು ಪಂದ್ಯಗಳಿಂದ ಎಂಟು ಅಂಕ ಕಲೆಹಾಕಿರುವ ಡೆಲ್ಲಿ ಕ್ಯಾಪಿಟಲ್ಸ್ ಏಳನೇ ಸ್ಥಾನದಲ್ಲಿದೆ. ಆಲ್ ರೌಂಡರ್ ಸ್ಥಾನದಲ್ಲಿ ಆಡುತ್ತಿರುವ ಲಲಿತ್ ಯಾದವ್ ಮೇಲೆ ತಂಡವು ವಿಶ್ವಾಸವಿಟ್ಟು ಎಲ್ಲಾ ಪಂದ್ಯಗಳಲ್ಲೂ ಕಣಕ್ಕಿಳಿಸುತ್ತಿದೆ. ಆದರೆ ಒಂಬತ್ತು ಪಂದ್ಯಗಳಿಂದ ಕೇವಲ 137 ರನ್ ಮತ್ತು ನಾಲ್ಕು ವಿಕೆಟ್‌ ಗಳಿಸಿರುವ ಲಲಿತ್‌ ತಮ್ಮ ಆಯ್ಕೆಗೆ ನ್ಯಾಯ ಒದಗಿಸಿಲ್ಲ. ಆದ್ದರಿಂದ ಇಂದು ಲಲಿತ್‌ ಬದಲು ಪ್ರತಿಭಾನ್ವಿತ ವಿಕೆಟ್‌ ಕೀಪರ್‌ ಬ್ಯಾಟ್ಸ್‌ ಮನ್‌ ಶ್ರೀಖರ್‌ ಭರತ್‌ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಅನ್ರಿಚ್ ನಾರ್ಟ್ಜೆ ಅನುಪಸ್ತಿ ತಂಡವನ್ನು ಪ್ರತಿ ಹಂತದಲ್ಲೂ ಕಾಡುತ್ತಿದೆ. ಕುಲದೀಪ್ ಯಾದವ್ (17 ವಿಕೆಟ್), ಖಲೀಲ್ ಅಹ್ಮದ್ (11) ಹೊಸತುಪಡಿಸಿದರೆ ಇತರ ಯಾವುದೇ ಬೌಲರ್‌ಗಳು ಪರಿಣಾಮಕಾರಿ ಪ್ರದರ್ಶನ ನೀಡಿಲ್ಲ.
ನಾಯಕ ರಿಷಭ್ ಪಂತ್ (ಒಂಬತ್ತು ಪಂದ್ಯಗಳಿಂದ 234) ಆಗಾಗ್ಯೆ ಮಿಂಚಿದರೂ ಡೆಲ್ಲಿ ತಂಡವು ತನ್ನ ನಾಯಕನಿಂದ ಹೆಚ್ಚಿನದನ್ನು ಬಯಸುತ್ತಿದೆ. ಅವರು ಸಂಪೂರ್ಣ ಸಾಮರ್ಥ್ಯದೊಂದಿಗೆ ಆಡಿದರೆ ತಂಡವು ಸನ್‌ ರೈಸರ್ಸ್‌ ಬಿಗಿದಾಳಿಯನ್ನು ಎದುರಿಸಿ ನಿಲ್ಲಲು ಸಾಧ್ಯ. ಪೃಥ್ವಿ ಶಾ- ಡೇವಿಡ್ ವಾರ್ನರ್ ಆರಂಭಿಕ ಪಾರ್ಟ್ನರ್‌ ಶಿಪ್‌, ಬೌಲಿಂಗ್‌ ವಿಭಾಗದಲ್ಲಿ ಶಾರ್ದೂಲ್ ಠಾಕೂರ್ ಕ್ಲಿಕ್‌ ಆದರೆ ಡೆಲ್ಲಿ ಅಪಾಯಕಾರಿ ತಂಡದಂತೆ ಕಾಣುತ್ತದೆ.
ಎರಡು ಸೋಲಿನೊಂದಿಗೆ ಆರಂಬಿಸಿದ ಸನ್‌ ರೈಸರ್ಸ್‌ ಬಳಿಕ ಸತತ ಐದು ಗೆಲುವಿನೊಂದಿಗೆ ಮಿಂಚುಹರಿಸಿತ್ತು. ಇದೀಗ ಬ್ಯಾಕ್‌ ಟು ಬ್ಯಾಕ್‌ ಎರಡು ಸೋಲುಗಳು ತಂಡವನ್ನು ಒತ್ತಡಕ್ಕೆ ತಳ್ಳಿದೆ. ಬ್ಯಾಟಿಂಗ್ ವಿಭಾಗವು ಮುಖ್ಯವಾಗಿ ಅಭಿಷೇಕ್, ಏಡೆನ್ ಮಾರ್ಕ್ರಾಮ್ (9 ಪಂದ್ಯಗಳಲ್ಲಿ 263) ಮತ್ತು ರಾಹುಲ್ ತ್ರಿಪಾಠಿ (9 ಪಂದ್ಯಗಳಲ್ಲಿ 228) ಮೇಲೆ ಅವಲಂಬಿತವಾಗಿದೆ.
ನಾಯಕ ಕೇನ್ ವಿಲಿಯಮ್ಸನ್ ಅಂತಹ ಉತ್ತಮ ಫಾರ್ಮ್‌ ನಲ್ಲಿಲ್ಲ. ಕೈ ಗಾಯದಿಂದ ತಂಡವು ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರ ಸೇವೆಯನ್ನು ಕಳೆದುಕೊಳ್ಳಲಿದೆ. ಎಡಗೈ ಸ್ಪಿನ್ನರ್ ಜಗದೀಶ ಸುಚಿತ್ ಇಂದಿನ ಪಂದ್ಯದಲ್ಲಿ ಆಡುವ ಸಾಧ್ಯತೆಗಳಿವೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್ ಮತ್ತು ಮಾರ್ಕೊ ಜಾನ್ಸೆನ್ ಅವರಿರುವ ಬಿರುಗಾಳಿ ವೇಗದ ಬೌಲಿಂಗ್‌ ಪಡೆ ಯಾವುದೇ ಎದುರಾಳಿಗೆ ಸವಾಲಾಗಲಿದೆ. ಬೌಲಿಂಗ್‌ ವಿಭಾಗ ಮಿಂಚಿದರೆ ತಂಡಕ್ಕೆ ಗೆಲುವು ಸುಲಭ.

ಮುಖಾಮುಖಿ:
ಉಭಯ ತಂಡಗಳು 20 ಬಾರಿ ಮುಖಾಮುಖಿಯಾಗಿದ್ದು, ಸನ್ ರೈಸರ್ಸ್ ಹೈದರಾಬಾದ್ 11ರಲ್ಲಿ ಗೆದ್ದು 8ರಲ್ಲಿ ಸೋತಿದೆ. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತು. ಪಂದ್ಯ ಟೈನಲ್ಲಿ ಅಂತ್ಯಗೊಂಡ ನಂತರ ಡೆಲ್ಲಿ ಕ್ಯಾಪಿಟಲ್ಸ್ ಸೂಪರ್ ಓವರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸೋಲಿಸಿತು.

ಪಂದ್ಯ ನಡೆಯುವ ಸ್ಥಳ ಮತ್ತು ಪಿಚ್ ವರ್ತನೆ
ದೆಹಲಿ ಕ್ಯಾಪಿಟಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವು ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ರಾತ್ರಿ 7:30 ಕ್ಕೆ ನಡೆಯಲಿದೆ. ಬ್ರಬೋರ್ನ್ ಸ್ಟೇಡಿಯಂನಲ್ಲಿನ ಪಿಚ್ ಯಾವಾಗಲೂ ಹೆಚ್ಚಿನ ಸ್ಕೋರಿಂಗ್ ಆಗಿರುತ್ತದೆ ಮತ್ತು ಗುರುವಾರ ಅದು ಹಾಗೆಯೇ ಉಳಿಯುವ ಸಾಧ್ಯತೆಯಿದೆ. ಈ ಮೈದಾನದಲ್ಲಿ ನಡೆದ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೀಡಿದ್ದ 170 ರನ್‌ ಗುರಿ ಬೆನ್ನಟ್ಟಿತು.

ಪ್ಲೇಯಿಂಗ್‌ XI
ಡೆಲ್ಲಿ ಕ್ಯಾಪಿಟಲ್ಸ್: ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (c&wk), ಲಲಿತ್ ಯಾದವ್, ರೋವ್ಮನ್ ಪೊವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮುಸ್ತಾಫಿಜುರ್ ರೆಹಮಾನ್, ಚೇತನ್ ಸಕರಿಯಾ

ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಕೇನ್ ವಿಲಿಯಮ್ಸನ್ (c), ರಾಹುಲ್ ತ್ರಿಪಾಠಿ, ಏಡನ್ ಮಾರ್ಕ್ರಾಮ್, ನಿಕೋಲಸ್ ಪೂರನ್ (WK), ಶಶಾಂಕ್ ಸಿಂಗ್, ವಾಷಿಂಗ್ಟನ್ ಸುಂದರ್, ಮಾರ್ಕೊ ಜಾನ್ಸೆನ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss