ಮತ್ತೆ ಮುಖ್ಯಮಂತ್ರಿ ಆಸೆ ಬಿಚ್ಚಿಟ್ಟ ಡಿಸಿಎಂ ಡಿ.ಕೆ ಶಿವಕುಮಾರ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ ಕಾಂಗ್ರೆಸ್ ಪಕ್ಷ, ಅಧಿಕಾರದ ಚುಕ್ಕಾಣಿ ಹಿಡಿದಿದೆ. ಸಿದ್ಧರಾಮಯ್ಯ ನೂತನ ಮುಖ್ಯಮಂತ್ರಿ ಕೂಡ ಆಗಿದ್ದಾರೆ.ಆದ್ರೆ ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪೈಪೋಟಿ ಕೂಡ ನಡೆಸಿದ್ದರು. ಆದ್ರೇ ಸಿಎಂ ಹುದ್ದೆಗೆ ಹೈಕಮಾಂಡ್ ಸಿದ್ಧರಾಮಯ್ಯ ಹೆಗಲಿಗೆ ನೀಡಿತು.

ಇದೀಗ ಕನಕಪುರಕ್ಷೇತ್ರದ ಕಲ್ಲಹಳ್ಳಿ, ಶಿವನಹಳ್ಳಿ, ಹಾರೋಹಳ್ಳಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಕೃತಜ್ಞತಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ಚುನಾವಣೆಯಲ್ಲಿ ಈ ಕ್ಷೇತ್ರದ ಜನ ಕೇವಲ ಡಿ.ಕೆ. ಶಿವಕುಮಾರ್ ಗೆ ಗೆಲುವು ಕೊಟ್ಟಿಲ್ಲ. ರಾಜ್ಯಕ್ಕೆ, ದೇಶಕ್ಕೆ ಹಾಗೂ ಎಲ್ಲ ಪಕ್ಷಗಳಿಗೆ ಒಂದು ಸಂದೇಶ ಕೊಟ್ಟಿದ್ದಾರೆ. ಹೀಗಾಗಿ ಕ್ಷೇತ್ರದ ಮಹಾಜನತೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ನನ್ನನ್ನು ಮುಖ್ಯಮಂತ್ರಿ ಮಾಡಲು ನೀವು ಬಹಳ ಆಸೆಯಿಂದ ಕೆಲಸ ಮಾಡಿದ್ದಿರಿ. ನೀವು ಆತಂಕ, ನಿರಾಸೆಪಡುವ ಅಗತ್ಯವಿಲ್ಲ. ಸೂಕ್ತ ಕಾಲದಲ್ಲಿ ಎಐಸಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ. ನಾವು ಶಾಂತಿಯಿಂದ, ಶ್ರದ್ಧೆಯಿಂದ ಕೆಲಸ ಮಾಡಬೇಕಿದೆ. ಈಗ ನಾನು, ಸಿದ್ದರಾಮಯ್ಯ, ಸಚಿವ ಸಂಪುಟ ಸಚಿವರೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ ನಿಮಗೆ ಕೊಟ್ಟಿರುವ ಮಾತು ಉಳಿಸಿಕೊಳ್ಳಬೇಕಿದೆ. ನಾನು ಸಿದ್ದರಾಮಯ್ಯನವರು ನಾಡ ದೇವತೆ ಚಾಮುಂಡೇಶ್ವರಿ ಸನ್ನಿದಿಯಲ್ಲಿ ಪ್ರಾರ್ಥನೆ ಮಾಡಿ ನಾವು ಕೊಟ್ಟಿರುವ ಮಾತು ಉಳಿಸಿಕೊಳ್ಳುವ ಹಾಗೂ ಗ್ಯಾರಂಟಿ ಯೋಜನೆ ಜಾರಿ ಮಾಡಲು ಸಾಮರ್ಥ್ಯ ಕೊಡುವಂತೆ ಕೇಳಿಕೊಂಡಿದ್ದೆವು ಎಂದರು.

ಈ ಚುನಾವಣೆಯಲ್ಲಿ ನಾನು ಹೆಚ್ಚು ಪ್ರಚಾರ ಮಾಡದೇ ಇದ್ದರೂ ನಿಮಗೆ ನೀವೇ ಅಭ್ಯರ್ಥಿಯಾಗಿ ಮತ ನೀಡಿದ್ದೀರಿ. 1,23,000 ಮತಗಳ ಅಂತರದ ದಾಖಲೆಯ ಜಯ ತಂದುಕೊಟ್ಟಿದ್ದೀರಿ. ಆಮೂಲಕ ನನ್ನನ್ನು ಮಗ, ಸೋದರನಂತೆ ಹರಸಿ ಬೆಳೆಸಿದ್ದೀರಿ. ನೀವು ನನಗೆ ಅಭಿನಂದನೆ ಸಲ್ಲಿಸಲು ಬೆಂಗಳೂರಿಗೆ ಬಂದರೂ ನಿಮ್ಮನ್ನು ಭೇಟಿ ಮಾಡಲು ಆಗಿರಲಿಲ್ಲ. ಹೀಗಾಗಿ ನಾನೇ ನಿಮ್ಮನ್ನು ಭೇಟಿ ಮಾಡಿ ಕೃತಜ್ಞತೆ ತಿಳಿಸಲು ಬಂದಿದ್ದೇನೆ ಎಂದು ತಿಳಿಸಿದರು.

ನಾನು ಇಂದು ಉಪಮುಖ್ಯಮಂತ್ರಿಯಾಗಿದ್ದರೂ ಇಂದು ನಿಮ್ಮಲ್ಲಿ ಒಬ್ಬನಾಗಿ, ನಿಮ್ಮಂತೆಯೇ ಕಾರ್ಯಕರ್ತನಾಗಿ ಇಲ್ಲಿಗೆ ಬಂದಿದ್ದೇನೆ. ಅಧಿಕಾರದ ಮದ ನನ್ನ ತಲೆಗೆ ಏರುವುದಿಲ್ಲ. ನಿಮ್ಮ ಋಣ ತೀರಿಸಿ, ನಿಮ್ಮ ಸೇವೆ ಯಾವ ರೀತಿ ಮಾಡಬೇಕು ಎಂದು ಅನೇಕ ನಾಯಕರಿಂದ ಸಲಹೆ ಪಡೆಯುತ್ತಿದ್ದೇನೆ ಎಂದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!