ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜೆರ್ಸಿಯ ಫ್ರಾಂಕ್ಲಿನ್ ಟೌನ್‌ಶಿಪ್‌ನಲ್ಲಿ 20 ಎಕರೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಆದಿ ಚುಂಚನಗಿರಿ ಮಠಕ್ಕೆ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡಿದ್ದು, ಕನ್ನಡಿಗರು ಮತ್ತು ಆದಿಚುಂಚನಗಿರಿ ಮಠದ ಭಕ್ತರು ಭೈರವನಾಥ ಪೀಠ ಸ್ಥಾಪನೆಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದರು.
ಈ ಕುರಿತು ವಿಡಿಯೋ ಸಂದೇಶವೊಂದನ್ನು ನೀಡಿರುವ ಡಿಕೆ.ಶಿವಕುಮಾರ್ ಅವರು, ಬಾಲಗಂಗಾಧರನಾಥ ಸ್ವಾಮೀಜಿಯವರು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಿರುವ ಗುರುಪೀಠ ನಮ್ಮ ಹಾಗೂ ನಿಮ್ಮ ಗುರುಪೀಠ. ನಮ್ಮ ಹಿರಿಯರು ಮನೆ ಹುಷಾರು, ಮಠ ಹುಷಾರು ಎಂದು ಬುದ್ದಿಮಾತು ಹೇಳುತ್ತಾ ಇದ್ದರು. ಮನುಷ್ಯನಿಗೆ ನೆಮ್ಮದಿ ನೀಡುವ ಜಾಗವೇ ದೇವಾಲಯ.
ಭಕ್ತ ಹಾಗೂ ಭಗವಂತನಿಗೂ ವ್ಯವಹಾರ ನಡೆಯುವ ಸ್ಥಳವೇ ದೇವಾಲಯ. ಮನುಷ್ಯನ ಜೀವ ಮತ್ತು ಜೀವನ ಸಂತೋಷದಿಂದ ಕೂಡಿರಬೇಕು. ನಗು, ನಗುತ್ತಾ ಬಾಳಬೇಕು. ನಗುವು ಸಹಜದ ಧರ್ಮ, ನಗಿಸುವುದೇ ಪರಧರ್ಮ, ನಗಿಸಿ, ನಗುತಾ ಬಾಳುವ ವರವ ಬೇಡಿಕೊಳೋ ಮಂಕುತಿಮ್ಮ ಎನ್ನುವ ಮಾತಿನಂತೆ ನಾವುಗಳು ನೆಮ್ಮದಿಯಿಂದ ಇರಲು ಒಂದು ಜಾಗ ಬೇಕಾಗಿದೆ. ಅದುವೇ ನಮ್ಮ, ನಿಮ್ಮ ಮಠ ಎಂದು ಹೇಳಿದ್ದಾರೆ.
ನಾನು ಈ ಹಿಂದೆ ಮಹಾರಾಷ್ಟ್ರದಲ್ಲಿ ಬಾಲಗಂಗಾಧರನಾಥ ಸ್ವಾಮೀಜಿ ಯವರು ಸ್ಥಾಪನೆ ಮಾಡಿದ್ದ ಭೈರವನಾಥ ದೇವಾಲಯಕ್ಕೆ ಭೇಟಿ ನೀಡಿದ್ದೆ. ಅತ್ಯಂತ ಶಕ್ತಿಶಾಲಿಯಾದ ದೇವರ ದೇವಸ್ಥಾನವನ್ನು ನ್ಯೂಜೆರ್ಸಿಯಲ್ಲಿ ಸ್ಥಾಪನೆ ಮಾಡಲು ಅಮೆರಿಕಾ ಸರ್ಕಾರ ಅನುಮತಿ ನೀಡಿರುವುದೇ ಒಂದು ವಿಸ್ಮಯ. ನಾವೆಲ್ಲರೂ ಈ ವಿಸ್ಮಯಕ್ಕೆ ಸಾಕ್ಷಿಗಳಾಗುತ್ತಿದ್ದೇವೆ ಎಂದಿದ್ದಾರೆ.