August 11, 2026
Tuesday, August 11, 2026
spot_img

ಡಿಸಿಎಂ ರೇಸ್‌: ಹೈಕಮಾಂಡ್‌ ನಿರ್ಧಾರವೇ ಅಂತಿಮ ಎಂದ ಸತೀಶ್ ಜಾರಕಿಹೊಳಿ

ಹೊಸದಿಗಂತ ವರದಿ ಬೆಳಗಾವಿ:

ನನಗೆ ಹಾಗೂ ಎಂ.ಬಿ. ಪಾಟೀಲ ಅವರಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವ ಕುರಿತು ಪಕ್ಷದೊಳಗೆ ಚರ್ಚೆ ನಡೆದಿರುವುದು ನಿಜ. ಆದರೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಸಮಯ ಹಾಗೂ ಸಂದರ್ಭ ಬಂದಾಗ ಈ ಕುರಿತು ಮಾತನಾಡಲಾಗುವುದು ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಮಂಗಳವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹುದ್ದೆ ನೀಡುವ ವಿಚಾರ ಪಕ್ಷದ ಹಿತದೃಷ್ಟಿಯಿಂದ ಚರ್ಚೆಯಾಗುತ್ತಿತ್ತು. ಆದರೆ ನಾವು ಯಾವುದೇ ಬೇಡಿಕೆ ಇಟ್ಟಿಲ್ಲ. ಪಕ್ಷವೇ ನಮ್ಮನ್ನು ಗುರುತಿಸಬೇಕು. ಈ ವಿಚಾರದಲ್ಲಿ ನಾವು ಯಾವುದೇ ರೀತಿಯ ಒತ್ತಡ ಹೇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿವೇಶನದೊಳಗೆ ಖಾತೆ ಹಂಚಿಕೆ:

ನೂತನ 19 ಸಚಿವರಿಗೆ ಇದೇ 13ರರೊಳಗಾಗಿ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಇನ್ನು ಎರಡು ದಿನಗಳಲ್ಲಿ ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುನ್ನ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.

ಖಾತೆ ಬದಲಾವಣೆ ಕುರಿತು ಚರ್ಚೆಯಾಗಿಲ್ಲ:

ತಮ್ಮ ಸಚಿವ ಖಾತೆ ಬದಲಾವಣೆ ಮಾಡಲಾಗುತ್ತದೆ ಎಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಖಾತೆ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ತಾವು ಕೂಡ ಯಾವುದೇ ಖಾತೆಯನ್ನು ಕೇಳಿಲ್ಲ. ಯಾರಿಗೆ ಯಾವ ಖಾತೆ ನೀಡಬೇಕು ಎಂಬುದು ಪಕ್ಷದ ತೀರ್ಮಾನಕ್ಕೆ ಬಿಟ್ಟ ವಿಚಾರ. ಪಕ್ಷದ ನಾಯಕತ್ವ ಕೈಗೊಳ್ಳುವ ನಿರ್ಧಾರವನ್ನು ನಾವು ಗೌರವಿಸುತ್ತೇವೆ ಎಂದರು.

ಸದ್ಯ ತಾವು ನಿರ್ವಹಿಸುತ್ತಿರುವ ಲೋಕೋಪಯೋಗಿ ಇಲಾಖೆಯಲ್ಲಿಯೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ ಅವರು, ತಮಗೆ ನೀಡಿರುವ ಲೋಕೋಪಯೋಗಿ ಇಲಾಖೆಯ ಜವಾಬ್ದಾರಿಯನ್ನೇ ಮುಂದುವರಿಸಿಕೊಂಡು ಹೋಗುವುದಾಗಿ ಹೇಳಿದರು. ಉಳಿದ ಖಾತೆಯನ್ನು ಮಹಿಳೆಯರಿಗೆ ನೀಡುವ ವಿಚಾರ ಈಗಾಗಲೇ ಪೂರ್ಣಗೊಂಡಿದ್ದು, ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದನ್ನು ಪಕ್ಷವೇ ತೀರ್ಮಾನಿಸಲಿದೆ ಎಂದರು.

ಶೀಘ್ರವೇ ಸೇತುವೆ ಕಾಮಗಾರಿ ಆರಂಭ:

ರಾಜ್ಯದಲ್ಲಿ ಎಲ್ಲೆಲ್ಲಿ ಸೇತುವೆಗಳ ಅವಶ್ಯಕತೆ ಇದೆಯೋ ಅಲ್ಲಲ್ಲಿ ನಿರ್ಮಾಣ ಕಾಮಗಾರಿ ಕಾರ್ಯ ಕೈಗೊಳ್ಳಲಾಗಿದೆ. ಕಾಮಗಾರಿಗಳಿಗೆ ಈಗಾಗಲೇ ಟೆಂಡರ್‌ ಕೂಡ ನೀಡಲಾಗಿದೆ. ಶೀಘ್ರವೇ ಕಾಮಗಾರಿಗಳು ಆರಂಭವಾಗಲಿವೆ. ಖಾನಾಪುರ ಹಾಗೂ ಉಗಾರ ʻಖುರ್ದ್’ ಕಡೆಯಿಂದ ಬರಲು ಪರಮಾನಂದವಾಡಿ ಸೇತುವೆ ನಿರ್ಮಾಣ ಹಂತದಲ್ಲಿದೆ ಎಂದು ಸಚಿವರು ತಿಳಿಸಿದರು.

ಮೂರು ಬರಪೀಡಿತ ತಾಲೂಕುಗಳಾಗಿ ಗುರುತು:

ಬರ ವಿಚಾರದಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ್ ಜಾರಕಿಹೊಳಿ, ಬರ ಪರಿಸ್ಥಿತಿ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದ ಅವರು, ಬರ ಪರಿಸ್ಥಿತಿಯ ಪರಿಶೀಲನೆಗಾಗಿ ರಾಜ್ಯದಾದ್ಯಂತ ಪ್ರವಾಸ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಯರಗಟ್ಟಿ, ಸವದತ್ತಿ ಹಾಗೂ ರಾಮದುರ್ಗ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಗುರುತಿಸಲಾಗಿದೆ ಎಂದು ತಿಳಿಸಿದರು.

ಇಂದು ಮುಖ್ಯಮಂತ್ರಿ ಅವರೊಂದಿಗೆ ನಡೆಯಲಿರುವ ವಿಡಿಯೋ ಕಾನ್ಫರೆನ್ಸ್ ಕುರಿತು ಪ್ರತಿಕ್ರಿಯಿಸಿದ ಅವರು, ಸಭೆಯಲ್ಲಿ ಆಡಳಿತ ಸುಧಾರಣೆ ಕುರಿತು ಚರ್ಚೆ ನಡೆಯಲಿದೆ. ಆಡಳಿತವನ್ನು ಮತ್ತಷ್ಟು ಚುರುಕುಗೊಳಿಸುವ ಉದ್ದೇಶದಿಂದ ಸಭೆ ನಡೆಸಲಾಗುತ್ತಿದೆ. ಬರ ಪರಿಸ್ಥಿತಿ ಸೇರಿದಂತೆ ವಿವಿಧ ಆಡಳಿತಾತ್ಮಕ ವಿಚಾರಗಳ ಬಗ್ಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದರು.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ:

ಇಬ್ಬರು ನಾಯಕರು ಒಗ್ಗಟ್ಟಿನಿಂದ ಇದ್ದೇವೆ ಎಂದು ಸ್ಪಷ್ಟ ಪಡಿಸಿದ ಅವರು, ನಾವು ಒಟ್ಟಿಗೆ ಇದ್ದೇವೆ ಮತ್ತು ಮುಂದೆ ಭವಿಷ್ಯದಲ್ಲಿ ಒಟ್ಟಿಗೆ ಇರುತ್ತೇವೆ. ಮೊದಲು ಸಿದ್ದರಾಮಯ್ಯನವರ ಜೊತೆಗೆ ಹಿಂದೆ ಏನು ನಮ್ಮ ಸಂಬಂಧವಿತ್ತೋ, ಅದು ಈಗಲೂ ಹಾಗೇ ಮುಂದುವರಿದಿದೆ. ನಮ್ಮ ನಡುವೆ ಅಸಮಾಧಾನವಿದೆ ಎನ್ನುವುದು ಕಪೋಲಕಲ್ಪಿತ ಸುದ್ದಿ. ಸಿದ್ದರಾಮಯ್ಯನವರು ಅಧಿಕಾರದಲ್ಲಿ ಇರಲಿ, ಬಿಡಲಿ, ಅವರು ನಮ್ಮ ನಾಯಕರು. ಅವರ ಜೊತೆಗೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದೆ. 2028ರಲ್ಲಿ ಅವರ ನಾಯಕತ್ವದಲ್ಲಿ ಚುನಾವಣೆ ನಡೆಯಲಿದೆ ಎಂದು ಹೇಳಿದರು.

ಇದನ್ನೂ ಓದಿ:

ಮುಂಬರುವ ದಿನದಲ್ಲಿ ಪ್ರವಾಸಿ ತಾಣಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪರಿಶೀಲನೆ ನಡೆಸುವುದರ ಮೂಲಕ ಜಿಲ್ಲೆಯ ಪ್ರವಾಸಿ ತಾಣಗಳನ್ನು ಅಭಿವೃದ್ದಿ ಪಡಿಸಲು ಪ್ರಯತ್ನಿಸಲಾಗುವುದು.

ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಿರುವುದರಲ್ಲಿ ತಪ್ಪಿಲ್ಲ:

ಬಿ. ನಾಗೇಂದ್ರ ಅವರನ್ನು ಸಚಿವರನ್ನಾಗಿ ಮಾಡಲಾಗಿದ್ದು, ಹೀಗಾಗಿ ಅವರನ್ನು ಮತ್ತೆ ಸಚಿವ ಸ್ಥಾನದಿಂದ ತೆಗೆಯುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಲೋಕಾಯುಕ್ತ ಹಾಗೂ ಎಸ್‌ ಐಟಿ ಅವರು ಕ್ಲೀನ್‌ ಚಿಟ್‌ ನೀಡದ ಬಳಿಕ, ನಾಗೇಂದ್ರ ಅವರಿಗೆ ಹೈಕಂಮಾಡ್‌ ಅಳೆದು-ತೂಗಿ ಸಚಿವ ಸ್ಥಾನ ನೀಡಿದೆ ಎಂದರು.

ಮಹಿಳೆಯರಿಗೆ ಸಚಿವ ಸ್ಥಾನ ಮೀಸಲಿದೆ:

ಮಹಿಳೆಯರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಮೀಸಲಿದ್ದು, ಬಾಕಿ ಉಳಿದ 1 ಸಚಿವ ಸ್ಥಾನವನ್ನು ಮಹಿಳೆಯರಿಗೆ ನೀಡಲಾಗುತ್ತದೆ ಎಂದು ಹೈಕಮಾಂಡ್ ಹೇಳಿದ್ದಾರೆ. ಆದರೆ ಆ ಸ್ಥಾನ ಯಾರಿಗೆ ಕೋಡುತ್ತಾರೆ ಎಂದು ಕಾದು ನೋಡಬೇಕು ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !