ಹೊಸದಿಗಂತ ವರದಿ, ಸುಂಟಿಕೊಪ್ಪ:
ಹಾಸನದ ಖಾಸಗಿ ಸುದ್ದಿವಾಹಿನಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯುವಕನೋರ್ವ ಇಲ್ಲಿಗೆ ಸಮೀಪದ ಹರದೂರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಹಾಸನದ ಕದಲಿ ಗ್ರಾಮದ ನಿವಾಸಿ ಹೇಮಂತ್ (27) ಎಂಬವರೇ ಆತ್ಮಹತ್ಯೆಗೆ ಶರಣಾದವರಾಗಿದ್ದಾರೆ.
ಬುಧವಾರ ಮನೆಯಿಂದ ನಾಪತ್ತೆಯಾಗಿರುವ ಬಗ್ಗೆ ಹೇಮಂತ್ ಅವರ ತಂದೆ ಪದ್ಮರಾಜ್ ಅವರು ಹಾಸನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದರೆ ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಹರದೂರು ಹೊಳೆಯ ಬದಿಯಲ್ಲಿ ಹೇಮಂತ್ ಅವರಿಗೆ ಸೇರಿದ ದ್ವಿಚಕ್ರ ವಾಹನ (ಕೆಎ47ವಿ2530) ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯದ ಮೇರೆ ಸುಂಟಿಕೊಪ್ಪ ಪೊಲೀಸರು ಹುಡುಕಾಟ ನಡೆಸಿದಾಗ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.
ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದರು.
ಮೃತ ದೇಹವನ್ನು ಕುಶಾಲನಗರ ತಾಲೂಕು ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು.