ಹೊಸದಿಗಂತ ಡಿಜಿಟಲ್ ಡೆಸ್ಕ್;
ಪ್ಯಾರಿಸ್ ಒಲಿಂಪಿಕ್ಸ್ ಫೈನಲ್ ಪಂದ್ಯಕ್ಕೂ ಮುನ್ನವೇ ವಿನೇಶ್ ಫೋಗಟ್ ಅನರ್ಹಗೊಂಡಿದ್ದು, ಈ ಮೂಲಕ ಒಲಿಂಪಿಕ್ ಪದಕ ಗೆಲ್ಲುವ ಅವಕಾಶ ನುಚ್ಚುನೂರಾಗಿದೆ.
ಇದು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ ವಿರೋಧದ ಚರ್ಚೆಗೂ ಗ್ರಾಸವಾಗಿದೆ. ಇದೆಲ್ಲದರ ನಡುವೆ ಒಲಿಂಪಿಕ್ಸ್ ಸಮಿತಿ ಸದಸ್ಯೆಯಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾಗಿರುವ ನೀತಾ ಅಂಬಾನಿ ಅವರು ಏನೂ ಮಾತನಾಡುತ್ತಿಲ್ಲ ಎನ್ನುವ ಚರ್ಚೆ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದಿತ್ತು.
ಇದೀಗ ನೀತಾ ಅಂಬಾನಿ, ಈ ಕುರಿತಂತೆ ಮೌನ ಮುರಿದಿದ್ದು, ದೇಶದ ಜನರ ಹೃದಯ ಒಡೆದಿದೆ ಎಂದು ಹೇಳಿದ್ದಾರೆ. ‘ಇಂದು ಇಡೀ ರಾಷ್ಟ್ರವು ವಿನೇಶ್ ಅವರ ನೋವು ಮತ್ತು ಹೃದಯ ಒಡೆದಿರುವಂತ ದುಃಖವನ್ನು ಹಂಚಿಕೊಳ್ಳುತ್ತದೆ. ಆಕೆ ಚಾಂಪಿಯನ್ ಫೈಟರ್, ಮತ್ತು ಅವರು ಮತ್ತೆ ಬಲಶಾಲಿ ಆಗುವುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ. ತನ್ನ ಅದ್ಭುತ ವಿಜಯಗಳಲ್ಲಿ ಮಾತ್ರವಲ್ಲದೆ, ಅವರಿಗೆ ವಿರುದ್ಧವಾದ ಸನ್ನಿವೇಶಗಳಲ್ಲಿಯೂ ಪುಟಿದೇಳುವುದು ಸಾಧ್ಯವಿದೆ ಎಂಬುದನ್ನು ಮತ್ತೆ ಮತ್ತೆ ತೋರಿಸಿದ್ದಾರೆ. ವಿನೇಶ್, ನೀವು ಮುಂದಿನ ಪೀಳಿಗೆಗೆ ಸ್ಫೂರ್ತಿಯಾಗಿದ್ದೀರಿ, ವಿಶೇಷವಾಗಿ ಯುವತಿಯರಿಗೆ ಮತ್ತು ಅವರ ಹೆತ್ತವರಿಗೆ, ಯಾವುದೇ ಪದಕಕ್ಕಿಂತ ಪ್ರಕಾಶಮಾನವಾಗಿ ನಿಮ್ಮ ಆತ್ಮವು ಹೊಳೆಯುತ್ತದೆ’ ಎಂದು ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆಯಾಗಿರುವ ನೀತಾ ಅಂಬಾನಿ ಹೇಳಿದ್ದಾರೆ.
ವಿನೇಶ್ ಫೋಗಟ್ ಇದೀಗ ತಮ್ಮನ್ನು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಅನರ್ಹಗೊಳಿಸಿರುವ ಕ್ರಮವನ್ನು ಪ್ರಶ್ನೆ ಮಾಡಿ ಕ್ರೀಡಾ ನ್ಯಾಯ ಮಂಡಳಿಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಈ ಮೇಲ್ಮನವಿಯಲ್ಲಿ ವಿನೇಶ್ ಫೋಗಟ್, ತಮಗೆ ಫೈನಲ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕು ಹಾಗೂ ತಮಗೆ ಜಂಟಿ ಬೆಳ್ಳಿ ಪದಕ ನೀಡಬೇಕು ಎಂದು ಮನವಿ ಸಲ್ಲಿಸಿದ್ದಾರೆ. ಇಂದು ಯಾವ ತೀರ್ಪು ಹೊರಬೀಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.