ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ಹೊಸ ಟ್ವಿಸ್ಟ್: ತೆರೆ ಮೇಲೆ ಖರ್ಗೆ ಹೆಸರು, ಇಂದು ನಾಮಪತ್ರ ಸಲ್ಲಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ಮತ್ತೊಂದು ಹೆಸರು ಕೇಳಿಬಂದಿದೆ. ಗೆಹ್ಲೋಟ್ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದ ಬೆನ್ನಲ್ಲೇ ಇದೀಗ ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತೆರೆಗೆ ಬಂದಿದೆ. ಇಂದು ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಗಡುವು ಕೂಡಾ ಮುಕ್ತಾಯವಾಗಲಿದೆ.  ಗುರುವಾರ ತಡರಾತ್ರಿ ಸೋನಿಯಾ ಗಾಂಧಿ ಖರ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.

ಸೋನಿಯಾ ಗಾಂಧಿಗೆ ಮಾತಿಗೆ ಸಮ್ಮತಿ ಸೂಚಿಸಿದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮತ್ತು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶುಕ್ರವಾರ (ಸೆ.30) ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆಗೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ತಡರಾತ್ರಿ ಸೋನಿಯಾ ಗಾಂಧಿ ಅವರೊಂದಿಗೆ ದೂರವಾಣಿ ಕರೆ ಮಾಡಿದ ನಂತರ ಖರ್ಗೆ ಅವರ ಹೆಸರನ್ನು ಅಂತಿಮಗೊಳಿಸಿದೆ. ಖರ್ಗೆ ಅವರ ಉಮೇದುವಾರಿಕೆಯನ್ನು ರಾಹುಲ್ ಗಾಂಧಿ ಕೂಡ ಬೆಂಬಲಿಸಿದ್ದಾರೆ ಎಂದು ರಾಹುಲ್ ಆಪ್ತ ಮೂಲಗಳು ಖಚಿತಪಡಿಸಿವೆ.

ರಾಜಸ್ಥಾನದ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಅವರನ್ನು ಸೋನಿಯಾ ಗಾಂಧಿ ಭೇಟಿಯಾದ ನಂತರ ಈ ಬೆಳವಣಿಗೆಗಳು ನಡೆದಿವೆ ಎಂದು ತಿಳಿದುಬಂದಿದೆ. ಖರ್ಗೆ ಯಾವಾಗಲೂ ಅಧ್ಯಕ್ಷೀಯ ಕಣದಲ್ಲಿರಲು ಅರ್ಹರು. ಆದರೆ ಅವರ ವಯಸ್ಸು ಮತ್ತು ವಿರೋಧ ಪಕ್ಷದ ನಾಯಕರಾಗಿ (ರಾಜ್ಯಸಭೆಯಲ್ಲಿ) ಪ್ರಸ್ತುತ ಜವಾಬ್ದಾರಿಯಿಂದಾಗಿ ಅನುಮಾನಗಳಿವೆ ಎಂದು ಮುಕುಲ್ ವಾಸ್ನಿಕ್ ಹೇಳಿದರು. ಆದರೆ ಕಾಂಗ್ರೆಸ್ ಅಧ್ಯಕ್ಷರಾಗಿ ಖರ್ಗೆ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ.

ಕಾಂಗ್ರೆಸ್ ಅಧ್ಯಕ್ಷೀಯ ಚುನಾವಣೆ ಅಂಗವಾಗಿ ಇಂದು ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗಲಿದೆ. ಶಶಿ ತರೂರ್ ಮತ್ತು ದಿಗ್ವಿಜಯ್ ಸಿಂಗ್ ಶುಕ್ರವಾರ ನಾಮಪತ್ರ ಸಲ್ಲಿಸಲಿದ್ದಾರೆ. ಇವರ ಜೊತೆಗೆ ಚುನಾವಣೆಗೆ ಸ್ಪರ್ಧಿಸಲು ಖರ್ಗೆ ಅವರೂ ನಾಮಪತ್ರ ಸಲ್ಲಿಸಲಿದ್ದಾರಂತೆ. ಇದರೊಂದಿಗೆ ತ್ರಿಕೋನ ಹೋರಾಟ ಖಚಿತವಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!