ಧಾರೇಶ್ವರ ನಿಧನ: ಶೋಕ ಸಾಗರದಲ್ಲಿ ಮುಳುಗಿದ ಉತ್ತರ ಕನ್ನಡ ಜಿಲ್ಲೆಯ ಅಭಿಮಾನಿಗಳು

ಹೊಸದಿಗಂತ ವರದಿ, ಅಂಕೋಲಾ:

ಬಡಗು ತಿಟ್ಟಿನ ಯಕ್ಷಗಾನ ಭಾಗವತಿಕೆಯಲ್ಲಿ ತಮ್ಮ ಮಧುರ ಕಂಠದ ಹಾಡುಗಾರಿಕೆಯ ಮೂಲಕ ಹೊಸ ಟ್ರೆಂಡ್ ಸೃಷ್ಟಿಸಿ ಸಹಸ್ರಾರು ಜನರನ್ನು ಯಕ್ಷರಂಗದತ್ತ ಸೆಳೆದ ಮೇರು ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಅವರ ನಿಧನದಿಂದ ಉತ್ತರ ಕನ್ನಡ ಜಿಲ್ಲೆಯ ಅವರ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ.

ಜಿಲ್ಲೆಯ ಪುರಾಣ ಕ್ಷೇತ್ರ ಗೋಕರ್ಣ ಮೂಲದವರಾದ ಸುಬ್ರಹ್ಮಣ್ಯ ಧಾರೇಶ್ವರ ಯಕ್ಷಗಾನ ಕ್ಷೇತ್ರದಲ್ಲಿ ಸುಮಾರು 46 ವರ್ಷಗಳ ಸೇವೆ ಸಲ್ಲಿಸುವ ಮೂಲಕ ತಮ್ಮ ಇಂಪಾದ ಹಾಡುಗಾರಿಕೆ ಮನ ಮೋಹಕ ಗಾನಸುಧೆಯಿಂದ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿ ಯಕ್ಷರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದರು.

ಗೋಕರ್ಣದಲ್ಲಿ ಸಣ್ಣ ಅಂಗಡಿ ತೆರೆದು ಎಲೆಕ್ಟ್ರೇಶನ್ ಕೆಲಸ ಮಾಡುತ್ತಿದ್ದ ಅವರು 1980 ರಲ್ಲಿ ಕೋಟ ಅಮೃತೇಶ್ವರಿ ಮೇಳದಲ್ಲಿ ಎಲೆಕ್ಟ್ರೇಶನ್ ಆಗಿ ವಿದ್ಯುತ್ ದೀಪ ಮತ್ತು ಧ್ವನಿವರ್ಧಕಗಳ ನಿರ್ವಾಹಕರಾಗಿ ಕೆಲಸಕ್ಕೆ ಸೇರಿದ ಅವರು ಅಲ್ಲಿ ಸಂಗೀತಗಾರರಾಗಿ ಸಹ ಕೆಲಸ ಮಾಡಿದರು.

ಸಾಂಪ್ರದಾಯಿಕ ಶೈಲಿಯ ಮೇರು ಭಾಗವತರೆಂದೇ ಖ್ಯಾತಿ ಪಡೆದ ನಾರಾಯಣಪ್ಪ ಉಪ್ಪೂರು ಅವರ ಬಳಿ ಭಾಗವತಿಕೆಯ ಅಧ್ಯಯನ ಮಾಡಿದ ಧಾರೇಶ್ವರ ಮುಂದೆ ಹೆಸರಾಂತ ವೃತ್ತಿ ಪರ ಮೇಳವಾದ ಪೆರ್ಡೂರು ಮೇಳದಲ್ಲಿ ಸುಮಾರು ಮೂರು ದಶಕಗಳ ಕಾಲ ಭಾಗವತರಾಗಿ, ಪ್ರಧಾನ ಭಾಗವತರಾಗಿ ತಿರುಗಾಟ ನಡೆಸಿ ಕೀರ್ತಿಯ ಉತ್ತುಂಗಕ್ಕೆ ಏರಿದರು 90 ರ ದಶಕದಲ್ಲಿ ಹೆಚ್ಚಿದ ಸಾಮಾಜಿಕ ಪ್ರಸಂಗಗಳ ನಿರ್ದೇಶನ, ವಿಶೇಷ ಶೈಲಿಯ ಹಾಡುಗಾರಿಕೆ ಮೂಲಕ ಯಕ್ಷಗಾನ ಪ್ರೇಮಿಗಳಲ್ಲಿ ಯಕ್ಷಗಾನದ ಕುರಿತು ಒಲವು ಹೆಚ್ಚುವಂತೆ ಮಾಡಿದ ಕೀರ್ತಿ ಸುಬ್ರಹ್ಮಣ್ಯ ಧಾರೇಶ್ವರ ಅವರಿಗೆ ಸಲ್ಲಬೇಕು.

ಕಾಳಿಂಗ ನಾವುಡರ ನಂತರ ಬಡಗಿನಲ್ಲಿ ಹೆಸರು ಪಡೆದ ಭಾಗವತರಾಗಿ ಹೊಸ ಹೊಸ ಪ್ರಯೋಗಗಳೊಂದಿಗೆ ಯಕ್ಷಗಾನಕ್ಕೆ ಹೊಸತನ ನೀಡಿದ ಅವರು ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಸನ್ಮಾನಗಳಿಗೆ ಭಾಜನರಾಗಿದ್ದರು.

ಯಕ್ಷರಂಗದ ಗಾನಕೋಗಿಲೆ
ಸುಬ್ರಹ್ಮಣ್ಯ ಧಾರೇಶ್ವರ ಅವರ ಅಗಲುವಿಕೆ ಯಕ್ಷರಂಗಕ್ಕೆ ತುಂಬಲಾಗದ ನಷ್ಟವಾಗಿದ್ದು ಧಾರೇಶ್ವರ ಅವರ ಗಾನ ಸುಧೆ ಯಕ್ಷರಂಗದಲ್ಲಿ ಸದಾ ಅಮರ ಎಂಬುದು ಅವರ ಅಭಿಮಾನಿಗಳ ಆಶಯವಾಗಿದೆ .

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!