ಹೊಸದಿಗಂತ ವರದಿ, ಚಿತ್ರದುರ್ಗ:
ಮುರುಘಾಮಠದ ಮುಭಾಗದಲ್ಲಿರುವ ಕೆರೆಯಲ್ಲಿ ದಿನದಿಂದ ದಿನಕ್ಕೆ ಮಾಲಿನ್ಯ ಹೆಚ್ಚಾಗುತ್ತಿದ್ದು ಅದರಲ್ಲಿನ ಜಲಚರ ಪ್ರಾಣಿಗಳು ಸಾವಿನ ಮನೆ ಸೇರುವಂತಾಗಿದೆ.
ಕಳೆದೊಂದು ತಿಂಗಳ ಹಿಂದೆ ಹೀಗೆ ಅಸುನೀಗಿದ್ದ ರಾಶಿ ರಾಶಿ ಮೀನುಗಳು ನೀರಿನಲ್ಲಿ ತೇಲುತ್ತಿದ್ದವು. ಇದರಿಂದ ಕೆರೆಯ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಂಡಿದ್ದು, ದಾರಿಹೋಕರಿಗೆ ಉಸಿರುಗಟ್ಟಿಸುವ ವಾತಾವರಣ ಉಂಟಾಗಿತ್ತು. ಇನ್ನು ಕೆರೆಯ ಆಸುಪಾಸಿನಲ್ಲಿರುವ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿತ್ತು.
ಇದೀಗ ಮತ್ತೆ ಅದೇ ಪರಿಸ್ಥಿತಿ ಮರುಕಳಿಸಿದೆ. ಕೆರೆಯಲ್ಲಿನ ನೀರು ಕಲುಷಿತಗೊಂಡಿದೆ. ಇದರಿಂದಾಗಿ ಎಲ್ಲ ಜಲಚರ ಪ್ರಾಣಿಗಳು, ವೈವಿಧ್ಯ ಮೀನು, ಕಪ್ಪೆ, ಹೇಡಿ ಸಾಯುತ್ತಿವೆ. ಇದರಿಂದ ಸುತ್ತಮುತ್ತಲಿನ ವಾತಾವರಣದಲ್ಲಿ ದುರ್ಗಂಧ ಬೀರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಯ ಸುತ್ತಮುತ್ತಲಿನ ಜನವಸತಿ ಪ್ರದೇಶದಲ್ಲಿನ ಪ್ಲಾಸ್ಟಿಕ್ ಮತ್ತಿತರ ನಿರುಪಯುಕ್ತ ವಸ್ತುಗಳು ಕೆರೆಯ ಒಡಲು ಸೇರುತ್ತಿವೆ. ಇದರಿಂದ ಕೆರೆಯ ನೀರು ಕಲುಷಿತಗೊಂಡು ಜಲಚರ ಪ್ರಾಣಿಗಳ ಪ್ರಾಣಕ್ಕೆ ಸಂಚಕಾರ ಬಂದೊದಗಿದೆ.
ಚಿತ್ರದುರ್ಗ ನಗರದ ಸುತ್ತಮುತ್ತಲಿನ ಕೆಲವು ಕೆರೆಗಳಿದ್ದು, ಅವುಗಳಲ್ಲಿ ಸ್ವಚ್ಛತೆ ಎಂಬುದು ಮರೀಚಿಕೆಯಾಗಿದೆ. ಅವುಗಳನ್ನು ಶುಚಿಗೊಳಿಸಿ ಸಂರಕ್ಷಣೆ ಮಾಡಿದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಇದರಿಂದ ಬರದ ಸಮಯದಲ್ಲೂ ರೈತರ ಕೊಳವೆ ಬಾವಿಗಳಲ್ಲಿ ಜೀವಜಲ ತುಂಬಿ ರೈತರು ಉತ್ತಮ ಫಸಲು ಬೆಳೆಯಬಹುದಾಗಿದೆ. ಆದರೆ ಮಠದ ಕುರುಬರಹಟ್ಟಿ ಕೆರೆ ಹಾಗೂ ಮಲ್ಲಾಪುರದ ಕೆರೆಗಳಲ್ಲಿ ಮಾಲಿನ್ಯ ಹೆಚ್ಚಾಗಿದ್ದು, ಇದರಿಂದ ವಾತಾವರಣದಲ್ಲಿನ ಗಾಳಿಯೂ ಮಲೀನವಾಗುವಂತಾಗಿದೆ.
ಈ ಕೆರೆಗಳಿಗೆ ಸುತ್ತಮುತ್ತಲಿನ ಜನವಸತಿ ಪ್ರದೇಶದಿಂದ ಬರುವ ಕಲುಷಿತ ನೀರು ಸಂಗ್ರವಾಗುತ್ತಿದೆ. ಇದರಿಂದ ಕೆರೆಯ ನೀರು ಮಲೀನವಾಗಿ ಜಲಚರಗಳು ಬದುಕಲಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಚಿತ್ರದುರ್ಗದ ಬಳಿ ಕಾಣಸಿಗುವ ಒಂದೆರಡು ಕೆರೆಗಳು ನಿರ್ವಹಣೆ ಕೊರತೆಯಿಂದಾಗಿ ಕೊಳಚೆ ಗುಂಡಿಗಳಾಗಿ ಮಾರ್ಪಟ್ಟಿವೆ. ಮಲ್ಲಾಪುರದ ಕೆರೆ, ಮಠದ ಕುರುಬರಟ್ಟಿ ಕೆರೆ ಎರಡು ಸಹ ಮಾಲಿನ್ಯದಿಂದ ಬಳಲುತ್ತಿದ್ದು, ಅದರಲ್ಲಿರುವ ಮೀನುಗಳೆಲ್ಲಾ ಸಾಯುತ್ತಿವೆ. ಇದರಿಂದ ವಾತಾವರಣದಲ್ಲಿ ದುರ್ಗಂಧ ಹೆಚ್ಚಾಗಿದ್ದು, ಇವುಗಳ ನಿರ್ವಹಣೆ ಬಗ್ಗೆ ಯಾವ ಅಧಿಕಾರಿಗಳು ತಲೆಕೆಡಿಸಕೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ಸುತ್ತಮುತ್ತಲು ವಾಸವಾಗಿರುವ ಮನೆಗಳಿಂದ, ಗ್ರಾಮಗಳಿಂದ ಚರಂಡಿ ಮತ್ತು ಕೊಳಚೆ ನೀರನ್ನ ಸೀದಾ ಕೆರೆಗಳಿಗೆ ಹರಿದುಬಿಡುತ್ತಿರುವುದರಿಂದ, ಕೆರೆಯ ನೀರು ಮಾಲಿನ್ಯಗೊಂಡು, ಅದರಲ್ಲಿರುವ ಮೀನುಗಳೆಲ್ಲಾ ಸಾವನ್ನಪ್ಪುತ್ತಿದ್ದಾವೆ. ಕೆರೆಯ ನೀರಿನ ಅಂಚಿನಲ್ಲಿ ಕಪ್ಪು ಬಣ್ಣದ ವಾಸನೆಯುಕ್ತ ನೀರು ಶೇಖರಣೆಯಾಗುತ್ತಿದೆ, ಕೆರೆ ಸುತ್ತಮುತ್ತಲಿರುವ ಹೋಟೆಲ್‌ಗಳು ಸಹ ತಮ್ಮ ತ್ಯಾಜ್ಯವನ್ನ, ಕೊಳಚೆ ನೀರನ್ನು ಕೆರೆಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ ಜನರು ಮಾತನಾಡುತ್ತಿದ್ದಾರೆ, ಇವುಗಳನ್ನು ನಗರಸಭೆಯವರು ವೀಕ್ಷಿಸಿ, ಕೆರೆಯನ್ನು ಸಂರಕ್ಷಿಸುವುದರ ಬಗ್ಗೆ ಕಾರ್ಯೋನ್ಮುಖರಾಗಬೇಕಾಗಿದೆ ಎಂದು ತಿಳಿಸಿದ್ದಾರೆ.
ಈ ಕೆರೆಗಳ ದುಸ್ಥಿತಿಯಿಂದಾಗಿ ಕೆರೆಯ ಸುತ್ತಮುತ್ತಲಿನ ಗ್ರಾಮದ ಜನರು ಸಹ ಉಸಿರುಗಟ್ಟಿದ ವಾತಾವರಣದಲ್ಲಿ ಬದುಕುವಂತಾಗಿದೆ. ಕೆಲವೊಮ್ಮೆ ಕೊಳವೆ ಬಾವಿಗಳಲ್ಲಿನ ನೀರೂ ಸಹ ಕಲುಷಿತವಾಗಿರುವುದುಂಟು. ಈ ನಿಟ್ಟಿನಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೆರೆಗಳ ಸ್ವಚ್ಛತೆ ಕಾಪಾಡಲು ಮುಂದಾಗಬೇಕು. ಕೆರೆಯಲ್ಲಿ ಸತ್ತಿರುವ ಮೀನುಗಳು, ನೀರಿನಲ್ಲಿ ತೇಲುತ್ತಿರುವ ಪ್ಲಾಸ್ಟಿಕ್ ಮತ್ತಿತರ ಘನತ್ಯಾಜ್ಯ ವಸ್ತುಗಳನ್ನು ತೆರವು ಮಾಡಬೇಕು. ಈ ಕುರಿತು ಜಿಲ್ಲಾಡಳಿತ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ಜ್ಞಾನ-ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷ ಹೆಚ್.ಕೆ.ಎಸ್.ಸ್ವಾಮಿ ಒತ್ತಾಯಿಸಿದ್ದಾರೆ.