ಸಲ್ಮಾನ್‌ ಖಾನ್‌ಗೆ ಕೊಲೆ ಧಮ್ಕಿ: ರಾಯಚೂರಿನಲ್ಲಿ ಗೀತ ರಚನೆಕಾರ ಅರೆಸ್ಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಕರ್ನಾಟಕದಿಂದಲೂ ಜೀವ ಬೆದರಿಕೆ ಸಂದೇಶ ಹೆಚ್ಚಾಗುತ್ತಲೇ ಇದೆ. ಇತ್ತೀಚಿಗಷ್ಟೇ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಹೆಸರಲ್ಲಿ ನಟ ಸಲ್ಮಾನ್‌ ಖಾನ್‌ರಿಂದ 5 ಕೋಟಿ ರೂ.ಗೆ ಬೇಡಿಕೆ ಇಟ್ಟು, ಜೀವ ಬೆದರಿಕೆ ಹಾಕಿದ ಪ್ರಕರಣ ಸಂಬಂಧ ಹಾವೇರಿಯಲ್ಲಿ ಸಂದೇಶ ಕಳುಹಿಸಿದ್ದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿತ್ತು.

ಇದೀಗ ಇಂತಹದ್ದೇ ಸಂದೇಶ ಕಳುಹಿಸಿದ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಮಾನ್ವಿಯ ಸುಹೇಲ್‌ ಪಾಷಾ (24) ಎಂಬಾತನನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರದ ಗೀತ ರಚನೆಕಾರನಾಗಿರುವ ಸುಹೇಲ್‌, ತನ್ನ ಹೊಸ ಹಾಡನ್ನು ಜನಪ್ರಿಯ ಮಾಡುವ ನಿಟ್ಟಿನಲ್ಲಿ ಇಂಥದ್ದೊಂದು ಬೆದರಿಕೆ ಹಾಕಿದ್ದ ಎಂಬ ವಿಷಯ ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ನ.7ರಂದು ಮುಂಬೈ ಸಂಚಾರಿ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸಾಪ್‌ ಸಹಾಯವಾಣಿಗೆ ಸಂದೇಶ ಕಳುಹಿಸಿದ್ದ ಸುಹೇಲ್‌,ರೂ.5 ಕೋಟಿ ಕೊಡದಿದ್ದರೆ ಸಲ್ಮಾನ್ ಖಾನ್ ಅವರನ್ನು ಹತ್ಯೆ ಮಾಡಲಾಗುವುದು, ಅಲ್ಲದೇ ‘ಮೈ ಸಿಕಂದರ್‌ ಹೂಂ’ ಹಾಡು ಬರೆದವರನ್ನೂ ಹತ್ಯೆ ಮಾಡಲಾಗುವುದು’ ಎಂದು ಬೆದರಿಕೆ ಹಾಕಿದ್ದ. ಸಂದೇಶ ಬಂದ ವಾಟ್ಸಾಪ್‌ ಸಂಖ್ಯೆ ಬೆನ್ನಟ್ಟಿದ ಮುಂಬೈ ಪೊಲೀಸರಿಗೆ ಅದು ವೆಂಕಟ ನಾರಾಯಣ ಎಂಬುವರ ಸಂಖ್ಯೆಯಿಂದ ರವಾನೆಯಾಗಿದ್ದು ಕಂಡುಬಂದಿತ್ತು. ಆದರೆ ತನಿಖೆ ವೇಳೆ ವೆಂಕಟ್‌ರ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸಂಪರ್ಕವೇ ಇರಲಿಲ್ಲ ಎಂಬುದು ಪತ್ತೆಯಾಗಿತ್ತು.

ಈ ಬಗ್ಗೆ ಅವರನ್ನು ವಿಚಾರಿಸಿದಾಗ ಅಪರಿಚಿತನೊಬ್ಬ ಕರೆ ಮಾಡುವ ಉದ್ದೇಶದಿಂದ ತನ್ನ ಮೊಬೈಲ್‌ ಪಡೆದಿದ್ದ ಎಂದು ವೆಂಕಟ್‌ ತಿಳಿಸಿದ್ದರು. ಜೊತೆಗೆ ಮೊಬೈಲ್‌ ಪರಿಶೀಲನೆ ವೇಳೆ ಮೊಬೈಲ್‌ಗೆ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಲು ಒಟಿಪಿ ಬಂದಿದ್ದ ವಿಷಯ ಪತ್ತೆಯಾಗಿತ್ತು. ಅದರ ಜಾಡು ಹಿಡಿದು ತೆರಳಿದಾಗ ಆರೋಪಿ ಸುಹೇಲ್‌, ನಾರಾಯಣ ಅವರ ಮೊಬೈಲ್‌ ಸಂಖ್ಯೆ ಬಳಸಿ ತನ್ನ ಮೊಬೈಲ್‌ನಲ್ಲಿ ವಾಟ್ಸಾಪ್‌ ಇನ್‌ಸ್ಟಾಲ್‌ ಮಾಡಿದ್ದ. ಇದಕ್ಕಾಗಿಯೇ ಆತ ವೆಂಕಟ್‌ ಅವರ ಮೊಬೈಲ್‌ ಪಡೆದು ಅದರ ಮೂಲಕ ಒಟಿಪಿ ಪಡೆದುಕೊಂಡಿದ್ದ ಎಂಬುದು ಖಚಿತಪಟ್ಟಿತ್ತು.

ಈ ಸುಳಿವಿನ ಆಧಾರದ ಮೇಲೆ ಮಾನ್ವಿಗೆ ತೆರಳಿದ ಪೊಲೀಸರು ಸುಹೇಲ್‌ನನ್ನು ಬಂಧಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!