ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ದಿಶಾ ಪಟಾನಿ ತಂದೆ ಬರೋಬ್ಬರಿ 25 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ದಿಶಾ ಪಟಾನಿ ತಂದೆ ನಿವೃತ್ತಿ ಪೊಲೀಸ್ ಅಧಿಕಾರಿಯಾಗಿದ್ದು, ಸರ್ಕಾರ ವಲಯದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ಐವರು 25 ಲಕ್ಷ ರೂಪಾಯಿ ವಂಚಿಸಿದ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ದಿಶಾ ಪಟಾನಿ ತಂದೆ ಜಗದೀಶ್ ಸಿಂಗ್ ಪಟಾನಿ ನಿವೃತ್ತ ಡೆಪ್ಯೂಟಿ ಸೂಪರಿಡೆಂಟ್ ಆಫ್ ಪೊಲೀಸ್ ಆಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದಾರೆ. ಮಗಳು ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾಳೆ. ವಿಶ್ರಾಂತಿ ಜೀವನದಲ್ಲಿರುವ ಜಗದೀಶ್ ಸಿಂಗ್ ಪಟಾಣಿಗೆ ಹೊಸ ಆಸೆಯೊಂದು ಶುರುವಾಗಿದೆ. ಕಮಿಷನರೇಟ್ ವಿಭಾಗದಲ್ಲಿ ಉನ್ನತ ಹುದ್ದೆ ಪಡೆಯಲು ಮುಂದಾಗಿದ್ದಾರೆ. ಇದೇ ವೇಳೆ ಐವರು ವಂಚಕರು ಜಗದೀಶ್ ಸಿಂಗ್ ಪಟನಿಗೆ ಹೈ ರ್ಯಾಂಕಿಂಗ್ ಹುದ್ದೆ ನೀಡುವ ಭರವಸೆ ನೀಡಿದ್ದಾರೆ.
ಶಿವೇಂದ್ರ ಪ್ರತಾಪ್ ಸಿಂಗ್, ದಿವಾಕರ್ ಗರ್ಗ್, ಆಚಾರ್ಯ ಜಯಪ್ರಕಾಶ್, ಪ್ರೀತೀ ಗರ್ಗ್ ಹಾಗೂ ಮತ್ತೊರ್ವ ಸರ್ಕಾರದಲ್ಲಿ ಉನ್ನತ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ.
ಜಗದೀಶ್ ಸಿಂಗ್ ಪಟಾನಿ ಈ ಐವರ ಮಾತು ಕೇಳಿ ತನ್ನ ಎಲ್ಲಾ ದಾಖಲೆ, ಪೊಲೀಸ್ ಇಲಾಖೆಯಲ್ಲಿ ಸಾಧನೆಗಳನ್ನು ದಾಖಲಿಸಿ ನೀಡಿದ್ದಾರೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ. ಇದರ ಜೊತೆಗೆ ವಂಚಕರು ಕೇಳಿದ 25 ಲಕ್ಷ ರೂಪಾಯಿ ಹಣವನ್ನು ನೀಡಿದ್ದಾರೆ. ಈ ಪೈಕಿ 5 ಲಕ್ಷ ರೂಪಾಯಿ ಹಣವನ್ನು ನಗದು ರೂಪದಲ್ಲಿ ನೀಡಿದ್ದರೆ, ಇನ್ನುಳಿದ 20 ಲಕ್ಷ ರೂಪಾಯಿ ಹಣವನ್ನು ಬೇರೆ ಬೇರೆ ಖಾತೆಗೆ ವರ್ಗಾಯಿಸಿದ್ದಾರೆ.
ಆರೋಪಿಗಳು ಸರ್ಕಾರ, ಸಚಿವರ ಜೊತೆ ಉತ್ತಮ ಸಂಪರ್ಕ ಹೊಂದಿರುವುದಾಗಿ ನಂಬಿಸಿದ್ದಾರೆ. ಸಚಿವರ ಜೊತಗಿನ ಫೋಟೋಗಳು, ಫೋನ್ ಮಾತುಕತೆಗಳನ್ನು ನೀಡಿ ಜಗದೀಶ್ ಸಿಂಗ್ ಪಟಾನಿಯನ್ನು ನಂಬಿಸಿದ್ದಾರೆ. ಸರ್ಕಾರಿ ಕಮಿಷನ್ ವಲಯದಲ್ಲಿ ಚೇರ್ಮೆನ್, ವೈಸ್ ಚೇರ್ಮೆನ್ ಸೇರಿದಂತೆ ಉನ್ನತ ಹುದ್ದೆ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
25 ಲಕ್ಷ ರೂಪಾಯಿ ಹಣ ವರ್ಗಾವಣೆಯಾಗುತ್ತಿದ್ದಂತೆ ಆರೋಪಿಗಳು ನಾಪತ್ತೆಯಾಗಿದ್ದಾರೆ. ಫೋನ್ ಸ್ವಿಚ್ ಆಫ್ ಆಗಿದೆ. ಎಲ್ಲಿದ್ದಾರೆ, ಹುದ್ದೆ ಕತೆ ಏನು ಯಾವುದು ಪತ್ತೆ ಇಲ್ಲ. ಕೆಲ ದಿನಗಳವರೆಗೆ ಕಾದ ಜಗದೀಶ್ ಸಿಂಗ್ ಪಟಾನಿಗೆ ತಾನು ಮೋಸ ಹೋಗಿದ್ದೇನೆ ಅನ್ನೋದು ಅರಿವಾಗಿದೆ. ಬಳಿಕ ಆರೋಪಿಗಳ ಪೈಕಿ ಓರ್ವನ ಭೇಟಿಯಾದ ಜಗದೀಶ್ ಸಿಂಗ್ ಪಟಾನಿ ಹಣ ವಾಪಸ್ ಕೊಡುವಂತೆ ತಾಕೀತು ಮಾಡಿದ್ದಾರೆ. ಈ ವೇಳೆ ಆರೋಪಿಗಳು ಬೆದರಿಕೆ ಹಾಕಲು ಆರಂಭಿಸಿದ್ದಾರೆ. ಹೀಗಾಗಿ ಪಟಾನಿ ನೇರವಾಗಿ ಕೋತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿವೃತ್ತ ಪೊಲೀಸ್ ಅಧಿಕಾರಿಯ ದೂರ ಸ್ವೀಕರಿಸಿದ ಪೊಲೀಸರು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.