ಹೊಸ ದಿಗಂತ ವರದಿ,ಚಿತ್ರದುರ್ಗ
ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ಮಹಿಳೆಯ ಕೊಲೆಯಾಗಿ ಮೂರು ದಿನಗಳಾಗಿದ್ದರೂ ಇನ್ನು ಸುಳಿವು ಪತ್ತೆಯಾಗಿಲ್ಲ. ವಿಶೇಷ ತನಿಖಾ ತಂಡ ರಚಿಸಿ ಕೊಲೆಗೈದವರ ಪತ್ತೆಹಚ್ಚಬೇಕೆಂದು ಬ್ರಹ್ಮಶ್ರಿ ನಾರಾಯಣಗುರು ಶಕ್ತಿಪೀಠದ ಪೀಠಾಧಿಪತಿ ಡಾ.ಪ್ರಣವಾನಂದ ಸ್ವಾಮೀಜಿ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಈಡಿಗ ಸಮುದಾಯಕ್ಕೆ ಸೇರಿದ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇನ್ನು ಹದಿಮೂರು ದಿನಗಳು ಕಾಯುತ್ತೇವೆ. ಅಷ್ಟರೊಳಗೆ ಕೊಲೆಗಡುಕರನ್ನು ಬಂಧಿಸದಿದ್ದರೆ ಇದೇ ತಿಂಗಳ ೩೦ ರಂದು ಜಿಲ್ಲಾ ರಕ್ಷಾಣಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಕೂರುವುದಾಗಿ ಸ್ವಾಮೀಜಿ ಗಡುವು ನೀಡಿದರು.
ಇನ್ನು ಮೂರ‍್ನಾಲ್ಕು ದಿನಗಳಲ್ಲಿ ಗೃಹ ಮಂತ್ರಿ ಡಾ.ಜಿ.ಪರಮೇಶ್ವರ್‌ರವರನ್ನು ಭೇಟಿಯಾಗಿ ಮಹಿಳೆಯ ಕೊಲೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತೇವೆ. ನ್ಯಾಯಾಲಯದ ಮೊರೆ ಹೋಗುವುದಕ್ಕಾಗಿ ವಕೀಲರ ಜೊತೆಯೂ ಚರ್ಚಿಸುತ್ತೇನೆ. ಮಹಿಳೆಯ ಮರಣೋತ್ತರ ಪರಿಕ್ಷೆ ವರದಿ ಹಾಗೂ ಎಫ್.ಎಸ್.ಐ.ಎಲ್.ವರದಿಯನ್ನು ಬೇಗನೆ ತರಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಡಾ.ಪ್ರಣವಾನಂದ ಸ್ವಾಮೀಜಿ ಆಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ತಿಪ್ಪೇಶ್, ಮಹಾಂತೇಶ್, ಮೋಹನ್ ಹಾಜರಿದ್ದರು.