ಹೊಸದಿಗಂತ ವರದಿ,ಕಲಬುರಗಿ:
ಶೇ 50ಕ್ಕೂ ಹೆಚ್ಚಿನ ಪ್ರಮಾಣದಲ್ಲಿರುವ ಒಬಿಸಿ ಸಮುದಾಯಕ್ಕೆ ಅವಕಾಶ ಮತ್ತು ಸೌಲಭ್ಯಗಳನ್ನು ನೀಡದೆ ಕಾಂಗ್ರೆಸ್ ಪಕ್ಷವು ವಂಚಿಸಿದೆ ಎಂದು ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ. ಲಕ್ಷ್ಮಣ್ ಅವರು ಆರೋಪಿಸಿದರು.
ಬಿಜೆಪಿ ಒಬಿಸಿ ಮೋರ್ಚಾ ವಿರಾಟ್ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಹಿಂದುಳಿದ ವರ್ಗಕ್ಕೆ ನಿರಂತರವಾಗಿ ಮೋಸ ಮಾಡಿದೆ. ಆದರೆ, ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಪ್ರಯತ್ನದಿಂದ ಮೀಸಲಾತಿ ಲಭಿಸಿದೆ. ಹಿಂದುಳಿದ ವರ್ಗದವರು ವೈದ್ಯರಾಗುವ ಕನಸು ನನಸಾಗಿದೆ. ಗರಿಷ್ಠ ಸಂಖ್ಯೆಯ ಸಚಿವ ಸ್ಥಾನವನ್ನೂ ತಮ್ಮ ಸಂಪುಟದಲ್ಲಿ ನೀಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಮೋದಿ ಅನೇಕ ಜನಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿದ್ದಾರೆ. ಅನೇಕ ಐತಿಹಾಸಿಕ ಮತ್ತು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಂಡಿದ್ದಾರೆ. ಕರ್ನಾಟಕದಲ್ಲೂ ಅನೇಕ ಜನಹಿತದ ಯೋಜನೆಗಳು ಜಾರಿಗೊಂಡಿವೆ. ಮೋದಿಜಿ ಅವರಿಗೆ ಉಡುಗೊರೆ ಕೊಡಲು ಕರ್ನಾಟಕದಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸಬೇಕಿದೆ ಎಂದು ಮನವಿ ಮಾಡಿದರು.
ಕಾಕಾ ಕಾಲೇಕರ್ ಶಿಫಾರಸನ್ನು ಪ್ರಧಾನಿ ನೆಹರೂ ಅವರು ಕಡೆಗಣಿಸಿದ್ದರು. ಬಳಿಕ ಮಂಡಲ್ ಕಮಿಷನ್ ಶಿಫಾರಸನ್ನು ರಾಜೀವ್ ಗಾಂಧಿ ವಿರೋಧಿಸಿದ್ದರು. ಒಬಿಸಿಗೆ ಮೀಸಲಾತಿ ಕೊಡುವುದನ್ನು ಕಾಂಗ್ರೆಸ್ ಪಕ್ಷ ಬಯಸಲಿಲ್ಲ ಎಂದು ಟೀಕಿಸಿದರು. ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಒಬಿಸಿ ಸಮುದಾಯದವರನ್ನು ಸಂಘಟಿಸುತ್ತಿರುವ ರಾಜ್ಯ ಒಬಿಸಿ ಘಟಕವನ್ನು ಅಭಿನಂದಿಸಿದರು.
ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ. ನರೇಂದ್ರಬಾಬು ಅವರು ಮಾತನಾಡಿ, ಈ ಸಮಾವೇಶ ಒಬಿಸಿ ಸಮುದಾಯಗಳ ಹೃದಯ ಮಿಡಿತದ ಸಂಕೇತ. ಹಿಂದುಳಿದ ವರ್ಗಗಳ ಸರ್ವತೋಮುಖ ಅಭಿವೃದ್ಧಿಯನ್ನು ಅವಕಾಶಗಳನ್ನು ಹಿಂದಿನ ಕಾಂಗ್ರೆಸ್ ಸರಕಾರವು ಕಡೆಗಣಿಸಿತ್ತು. ಆದರೆ, ನರೇಂದ್ರ ಮೋದಿಜಿ ಅವರ ಸರಕಾರವು ಒಬಿಸಿಗೆ ಗರಿಷ್ಠ ಅವಕಾಶ- ಪ್ರಾತಿನಿಧ್ಯ ಮತ್ತು ಯೋಜನೆಗಳನ್ನು ನೀಡಿದೆ ಎಂದು ತಿಳಿಸಿದರು.