ಹೊಸದಿಗಂತ ಡಿಜಿಟಲ್ ಡೆಸ್ಕ್:
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಲಾಗುವುದು ಎಂದು ಭಾರತೀಯ ಜನತಾ ಪಕ್ಷದ ನಾಯಕ ಅಶೋಕ್ ಚವಾಣ್ ಅವರು ಬುಧವಾರ ಹೇಳಿದ್ದಾರೆ.
ಇಂದು ಎಎನ್‌ಐ ಜೊತೆ ಮಾತನಾಡಿದ ಅಶೋಕ್ ಚವಾಣ್ ಅವರು, “ಮೂರು ಪಕ್ಷಗಳ ಮೈತ್ರಿ ಇದೆ. ಆದ್ದರಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡ ನಂತರವೇ ಮಹಾರಾಷ್ಟ್ರ ನೂತನ ಸಿಎಂ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಫಲಿತಾಂಶ ಪ್ರಕಟವಾಗಿ ಕೇವಲ 4 ದಿನಗಳು ಆಗಿರುವುದರಿಂದ ಯಾವುದೇ ವಿಳಂಬವಿಲ್ಲ. ರಾಮದಾಸ್ ಅಠವಳೆ ಅವರು ಸ್ಥಿರ ಸರ್ಕಾರ ರಚನೆಯಾಗಲಿದೆ ಎಂದು ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ ಎಂದಿದ್ದಾರೆ.
ಈ ಹಿಂದೆ ನವೆಂಬರ್ 26 ರಂದು, ಕೇಂದ್ರ ಸಚಿವ ರಾಮದಾಸ್ ಅಠವಳೆ ಅವರು, ದೇವೇಂದ್ರ ಫಡ್ನವಿಸ್ ಅವರು ಮಹಾಯುತಿ ಸರ್ಕಾರವನ್ನು ಮುನ್ನಡೆಸಬೇಕು, “ಮಹಾರಾಷ್ಟ್ರದ ಜನರು ಅವರನ್ನು ಮುಂದಿನ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತಾರೆ” ಮತ್ತು ಏಕನಾಥ್ ಶಿಂಧೆ ಅವರು ಉಪ ಮುಖ್ಯಮಂತ್ರಿಯಾಗಬಹುದು ಅಥವಾ ಮೋದಿ ಸರ್ಕಾರದಲ್ಲಿ ಕೇಂದ್ರ ಸಚಿವರಾಗಬಹುದು ಎಂದು ಹೇಳಿದ್ದರು.