ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದವೀಧರರಿಗೆ ಯುವ ನಿಧಿ ಗ್ಯಾರಂಟಿ ಘೋಷಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ, ಇದೀಗ ಅದೇ ಪದವೀಧರರನ್ನು ರೂಪಿಸುವ ವಿಶ್ವವಿದ್ಯಾಲಯಗಳನ್ನೇ ಮುಚ್ಚಲು ಹೊರಟಿದ್ದು ಅಕ್ಷಮ್ಯ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಕಿಡಿಕಾರಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕದಾದ್ಯಂತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಕಲ್ಪಿಸಲು 10 ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರೆ, ಕಾಂಗ್ರೆಸ್ ಸರ್ಕಾರ ಅವನ್ನು ಮುಚ್ಚುವ ಮೂಲಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಕೊಳ್ಳಿಯಿಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ ಸರ್ವರ ಮೂಲಭೂತ ಹಕ್ಕು. ಆದರೆ, ರಾಜ್ಯ ಸರ್ಕಾರ ಇದನ್ನು ಕಸಿದುಕೊಳ್ಳುತ್ತಿದೆ. ಒಂದೆಡೆ ಅರೆಬರೆ ಯುವ ನಿಧಿ ನೀಡುತ್ತ, ಇನ್ನೊಂದೆಡೆ ವಿದ್ಯಾರ್ಥಿಗಳ ಶಿಕ್ಷಣ ಮೊಟಕುಗೊಳಿಸಲು ನೋಡುತ್ತಿದೆ. ಇದರಿಂದಾಗಿ ಶಿಕ್ಷಣದ ಮೂಲಭೂತ ಹಕ್ಕಿಗೆ ಕೊಡಲಿ ಪೆಟ್ಟು ಬೀಳುತ್ತಿದೆ, ರಾಜ್ಯ ಕಾಂಗ್ರೆಸ್ ಸರ್ಕಾರ ವಿವಿಗಳನ್ನೂ ಆದಾಯದ ಮೂಲ ಮತ್ತು ಒಂದು ಸರಕನ್ನಾಗಿ ನೋಡುತ್ತಿರುವುದು ಖಂಡನೀಯ. ವಿವಿಗಳು ಆರ್ಥಿಕ ಮತ್ತು ಅಗತ್ಯ ಭೂಮಿಯ ಕೊರತೆ ಎದುರಿಸುತ್ತಿವೆ ಎಂಬ ಕುಂಟು ನೆಪವೊಡ್ಡುವ ಈ ಸರ್ಕಾರವೇ ಮೊದಲು ಆರ್ಥಿಕ ಸಂಕಷ್ಟದಲ್ಲಿದೆ. ಹಾಗಾಗಿ ಇಂಥ ಕ್ರಮಕ್ಕೆ ಮುಂದಾಗುತ್ತಿದೆ ಎಂದು ಟೀಕಿಸಿದರು.