ಹೊಸದಿಗಂತ ವರದಿ,ಮೈಸೂರು:
ನನ್ನ ಮಗ ಹರೀಶ್ ಗೌಡನಿಗೆ ಬರುವ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಜಿಲ್ಲೆಯ ಯಾವುದಾದರೂ ಮೂರು ಕ್ಷೇತ್ರಗಳ ಪೈಕಿ ಟಿಕೆಟ್ ನೀಡುವ ಕುರಿತು ಕಾಂಗ್ರೆಸ್ ತೀರ್ಮಾನ ಮಾಡಿದ ನಾನು, ನನ್ನ ಬೆಂಬಲಿಗರು ಕಾಂಗ್ರೆಸ್ ಸೇರುವ ಕುರಿತು ಉಳಿದ ಮಾತುಕತೆ ನಡೆಸುತ್ತೇನೆ ಎಂದು ಮೈಸೂರಿನ ಚಾಮುಂಡೇಶ್ವರಿ ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ಶನಿವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಬ್ಬರಿಗೂ ನನ್ನ ಮಗನಿಗೆ ಟಿಕೆಟ್ ಕೊಡುವ ವಿಚಾರದಲ್ಲಿ ನಿರ್ಧಾರ ತಿಳಿಸಿ, ನಂತರ ನನ್ನ ತೀರ್ಮಾನ ಹೇಳುತ್ತೇನೆ ಎಂದು
ನಾನು ಸ್ಪಷ್ಟವಾಗಿ ಹೇಳಿದ್ದೇನೆ ಎಂದರು.
ನಾವು ಹುಣಸೂರು ಕ್ಷೇತ್ರಕ್ಕೆ ಮೊದಲ ಆದ್ಯತೆ ನೀಡಲಿದ್ದು, ಕೆ.ಆರ್. ನಗರ ಎರಡನೇ ಆದ್ಯತೆ, ನಂತರ ಚಾಮರಾಜ ಕ್ಷೇತ್ರ ಮೂರನೇ ಆದ್ಯತೆಯಾಗಿದೆ. ಈ ಮೂರರಲ್ಲಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ನನ್ನ ಮಗನಿಗೆ ಟಿಕೆಟ್ ನೀಡಲಿ. ನಾನು ಚಾಮುಂಡೇಶ್ವರಿ ಕ್ಷೇತ್ರದಲ್ಲೇ ಸ್ಪರ್ಧೆ ಮಾಡುತ್ತೇನೆ ಎಂದು ತಿಳಿಸಿದರು.
ಈ ನಡುವೆ ಬಿಜೆಪಿ ಅವರು ಕೂಡ ನಮ್ಮ ಜೊತೆ ಇರಿ ಎಂದು ಕೇಳುತ್ತಿದ್ದಾರೆ. ಅವರು ತಂದೆ- ಮಗ ಇಬ್ಬರಿಗೂ ಟಿಕೆಟ್ ಕೊಡುವ ಭರವಸೆ ನೀಡಿದ್ದಾರೆ. ನಾನು ಸದ್ಯಕ್ಕೆ ಯಾವ ನಿರ್ಧಾರ ಮಾಡಿಲ್ಲ. ಇನ್ನ 6 ತಿಂಗಳ ನಂತರ ಚಾಮುಂಡಿ ತಾಯಿಯ ನಿರ್ಣಯದಂತೆ ನಾನು ನಿರ್ಧಾರ ಕೈಗೊಳ್ಳುತ್ತೇನೆ. ಚಾಮುಂಡಿ ದೇವಿ ಅಂದು ಏನೂ ಅನುಗ್ರಹಿಸುತ್ತೋ ಅದೇ ನಿರ್ಧಾರ ನನ್ನದ್ದು. ಎಲ್ಲಾ ನಿರ್ಧಾರ ತಾಯಿ ಚಾಮುಂಡೇಶ್ವರಿಗೆ ಬಿಟ್ಟಿದ್ದೇನೆ ಎಂದರು.
ಜೆಡಿಎಸ್ ನವರು ನನ್ನನ್ನು ಇದುವರೆಗೂ ಸಂಪರ್ಕಿಸಿಲ್ಲ. ಪಕ್ಷದ ಯಾವ ಸಭೆ, ಸಮಾರಂಭಕ್ಕೂ ಕರೆಯುತ್ತಿಲ್ಲ. ಸಿಎಂ ಸ್ಥಾನದಿಂದ ಎಚ್ಡಿಕೆ ಕೆಳಗೆ ಇಳಿದ ನಂತರದ ದಿನದಿಂದ ನನ್ನ ಜೊತೆ ಜೆಡಿಎಸ್ ನವರು ಸಂಪರ್ಕದಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದರು.