ಕ್ರಿಕೆಟ್‌ ವಲಯದಲ್ಲೀಗ ಶುರುವಾಗಿದೆ ದೀಪ್ತಿ ಶರ್ಮಾ ಮಾಡಿದ ಮಂಕಡಿಂಗ್ ರನೌಟ್ ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ಭಾರತವು ಗೆಲುವು ಸಾದಿಸುವ ಮೂಲಕ ಜೂಲನ್ ಗೋಸ್ವಾಮಿ ಪಾಲಿಗೆ ವಿದಾಯದ ಉಡುಗರೆಯನ್ನು ನೀಡಿದೆ.

ಪಂದ್ಯದಲ್ಲಿ ಆಲ್ರೌಂಡರ್ ದೀಪ್ತಿ ಶರ್ಮಾ, ನಾನ್‌ ಸ್ಟ್ರೈಕರ್‌ನಲ್ಲಿದ್ದ ಇಂಗ್ಲೆಂಡ್‌ನ ಚಾರ್ಲೆಟ್ಟೆ ಡೀನ್ ಅವರನ್ನು ರನೌಟ್ ಮಾಡುವ ಮೂಲಕ ಭಾರತ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿದ್ದರು. ಆದರೆ ಇದೀಗ ದೀಪ್ತಿ ಶರ್ಮಾ ಮಾಡಿದ ರನೌಟ್‌ ಕ್ರಿಕೆಟ್‌ ವಲಯದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಬಹುತೇಕ ಮಂದಿ ದೀಪ್ತಿ ಶರ್ಮಾ ಮಾಡಿದ ರನೌಟ್‌ ಸಮರ್ಥಿಸಿಕೊಂಡರೆ, ಮತ್ತೆ ಕೆಲವರು ಇದು ಕ್ರೀಡಾ ಸ್ಪೂರ್ತಿಗೆ ವಿರುದ್ದದವಾದ ನಡೆ ಎಂದು ರಾಗ ತೆಗೆದಿದ್ದಾರೆ.

170 ರನ್‌ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಆರಂಭಿಕ ಆಘಾತದ ಹೊರತಾಗಿಯೂ ಕೊನೆಯಲ್ಲಿ ಗೆಲುವಿನ ದಾಪುಗಾಲಿಡುತ್ತಿತ್ತು. ಒಂದು ಹಂತದಲ್ಲಿ ಇಂಗ್ಲೆಂಡ್ ತಂಡವು 118 ರನ್‌ಗಳಿಗೆ 9 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಕೊನೆಯಲ್ಲಿ ಚಾರ್ಲೊಟ್ಟೆ ಡೀನ್ ಹಾಗೂ ಪ್ರೆಯಾ ಡೇವಿಸ್ ಜೋಡಿ 10ನೇ ವಿಕೆಟ್‌ಗೆ 35 ರನ್‌ಗಳ ಜತೆಯಾಟವಾಡುವ ಮೂಲಕ ಇಂಗ್ಲೆಂಡ್ ಪಾಳಯದಲ್ಲಿ ಗೆಲುವಿನ ಆಸೆ ಮೂಡಿಸಿದರು. ಆದರೆ 44ನೇ ಓವರ್‌ನ ಮೂರನೇ ಎಸೆತದಲ್ಲಿ ದೀಪ್ತಿ ಶರ್ಮಾ ಬೌಲಿಂಗ್ ಮಾಡುವ ಮುನ್ನವೇ ನಾನ್‌ ಸ್ಟ್ರೈಕರ್‌ನಲ್ಲಿದ್ದ ಚಾರ್ಲೊಟ್ಟೆ ಡೀನ್‌ ಕ್ರೀಸ್‌ ತೊರೆದು ಮುಂದೆ ಹೋದಾಗ ತಡ ಮಾಡದೇ ದೀಪ್ತಿ ಶರ್ಮಾ ಬೇಲ್ಸ್‌ ಎಗರಿಸುವ ಮೂಲಕ ರನೌಟ್ ಮಾಡಿದರು. ಕೆಲ ದಿನಗಳ ಹಿಂದಷ್ಟೇ ಐಸಿಸಿಯು ಮಂಕಡಿಂಗ್ ಎನ್ನುವ ಬದಲಿಗೆ ಈ ರೀತಿ ಔಟ್ ಮಾಡುವುದನ್ನು ರನೌಟ್ ಎಂದು ತೀರ್ಮಾನಿಸಿ ತನ್ನ ನಿರ್ಣಯ ಪ್ರಕಟಿಸಿತ್ತು. ಇದೀಗ ದೀಪ್ತಿ ಶರ್ಮಾ ಈ ರನೌಟ್ ಅನುಷ್ಟಾನಕ್ಕೆ ತಂದಿದ್ದಾರೆ.

ಪರ -ವಿರೋಧ ಚರ್ಚೆ
ದೀಪ್ತಿ ಶರ್ಮಾ ಮಾಡಿದ ಈ ರನೌಟ್ ಕುರಿತಂತೆ ಸಾಕಷ್ಟು ಪರ ಹಾಗೂ ವಿರೋಧ ಚರ್ಚೆಗಳು ವ್ಯಕ್ತವಾಗಿವೆ. ಇಂಗ್ಲೆಂಡ್ ಕ್ರಿಕೆಟಿಗರಾದ ಜೇಮ್ಸ್‌ ಆಂಡರ್‌ಸನ್, ಸ್ಟುವರ್ಟ್‌ ಬ್ರಾಡ್, ಸ್ಯಾಮ್ ಬಿಲ್ಲಿಂಗ್ಸ್ ಸೇರಿದಂತೆ ಕೆಲ ಕ್ರಿಕೆಟಿಗರು ದೀಪ್ತಿ ಶರ್ಮಾ ನಡೆಯನ್ನು ಟೀಕಿಸಿದ್ದಾರೆ. ಸ್ಯಾಮ್ ಬಿಲ್ಲಿಂಗ್ಸ್‌, ಕ್ರಿಕೆಟ್ ಆಡುವ ಯಾರೂ ಕೂಡಾ ಇದನ್ನು ಒಪ್ಪಲು ಸಾಧ್ಯವಿಲ್ಲ, ಇದು ಕ್ರಿಕೆಟ್ ಅಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಭಾರತದ ವಾಸೀಂ ಜಾಫರ್, ರವಿಚಂದ್ರನ್ ಅಶ್ವಿನ್, ವಿರೇಂದ್ರ ಸೆಹ್ವಾಗ್ ಸೇರಿದಂತೆ ಹಲವು ಕ್ರಿಕೆಟಿಗರು ದೀಪ್ತಿ ಶರ್ಮಾ ಅವರು ಮಾಡಿದ ರನೌಟ್ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಈ ಮೊದಲು ರವಿಚಂದ್ರನ್ ಅಶ್ವಿನ್‌, ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದ ಇಂಗ್ಲೆಂಡ್ ಬ್ಯಾಟರ್ ಜೋಸ್ ಬಟ್ಲರ್ ಅವರನ್ನು ಮಂಕಡಿಂಗ್ ರನೌಟ್ ಮಾಡಿದ್ದರು. ಇದಾದ ಬಳಿಕ ಈ ರೀತಿಯ ಘಟನೆ ನಡೆದಾಗಲೆಲ್ಲಾ ಕ್ರಿಕೆಟ್ ಅಭಿಮಾನಿಗಳು ರವಿಚಂದ್ರನ್ ಅಶ್ವಿನ್ ಅವರನ್ನು ನೆನಪಿಸಿಕೊಳ್ಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here