ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಜಾತಿ, ಧರ್ಮ, ಭಾಷೆಯ ಆಧಾರದ ಮೇಲೆ ಸಮಾಜವನ್ನು ವಿಘಟಿಸಲು ಯತ್ನಿಸುವ ಶಕ್ತಿಗಳನ್ನು ಜನರು ಹೊರದಬ್ಬಿದ್ದಾರೆ ಎಂಬುದಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯೇ ಸಾಕ್ಷಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದರು.
ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಶನಿವಾರ ಕಾರ್ಯಕರ್ತರನ್ನುದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಿದರು.
ಮಹಾರಾಷ್ಟ್ರದಲ್ಲಿ ಮಹಾಯುತಿ ಗೆದ್ದಿದೆ. ದೇಶದಲ್ಲಿ ನಕಾತರಾತ್ಮಕ ಚಿಂತನೆ, ಪರಿವಾರವಾದಕ್ಕೆ ಮತ್ತೆ ಸೋಲಾಗಿದೆ. ವಿಕಸಿತ ಭಾರತದ ಸಂಕಲ್ಪವು ಬೆಳಗಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟಕ್ಕೆ ಕಪಾಳಮೋಕ್ಷವಾಗಿದೆ ಎಂದು ಮೋದಿ ಹೇಳಿದರು.
ಮಹಾರಾಷ್ಟ್ರದಲ್ಲಿ ಎಲ್ಲ ದಾಖಲೆಗಳನ್ನು ಎನ್ಡಿಎ ಮೈತ್ರಿ ಮುರಿದಿದೆ. ಕಳೆದ 50 ವರ್ಷಗಳಲ್ಲಿಯೇ ರಾಜ್ಯದಲ್ಲಿ ದೊಡ್ಡ ಗೆಲುವು ಸಾಧಿಸಿದೆ. ಸತತ ಮೂರನೇ ಬಾರಿಗೆ ಜನರು ಬಿಜೆಪಿ ಮೈತ್ರಿಗೆ ಗೆಲುವು ನೀಡಿದ್ದಾರೆ. ಬಿಜೆಪಿಯು ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇದು ಐತಿಹಾಸಿಕ ಗೆಲುವಾಗಿದೆ. ಇದು ಅಭಿವೃದ್ಧಿಗೆ ಜನರು ಹಾಕಿದ ಜೈಕಾರವಾಗಿದೆ ಎಂದು ಬಣ್ಣಿಸಿದರು.
ಗೋವಾ, ಗುಜರಾತ್, ಛತ್ತೀಸ್ಗಢ, ಹರಿಯಾಣ, ಮಧ್ಯಪ್ರದೇಶದಲ್ಲಿ ನಾವು ಈಗಾಗಲೇ ಸತತ ಮೂರು ಬಾರಿ ಗೆಲುವು ಸಾಧಿಸಿದ್ದೇವೆ. ಬಿಹಾರದಲ್ಲೂ ಎನ್ಡಿಎ ಸರ್ಕಾರಕ್ಕೆ ಗೆಲುವು ಸಿಕ್ಕಿದೆ. ಕೇಂದ್ರದಲ್ಲೂ ಕೂಡ ಎನ್ಡಿಎಗೆ ಸತತ ಮೂರನೇ ಬಾರಿಗೆ ನೀಡಿದ್ದೀರಿ ಎಂದು ಸ್ಮರಿಸಿದರು.
ಅಭೂತಪೂರ್ವ ಗೆಲುವು ನೀಡಿದ್ದಕ್ಕೆ ಮಹಾರಾಷ್ಟ್ರ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಭಿವೃದ್ಧಿಯನ್ನು ಮೆಚ್ಚಿ ಅವರು ಮೂರನೇ ಬಾರಿಗೆ ಅಧಿಕಾರ ನೀಡಿದ್ದಾರೆ. ಈ ಗೆಲುವು ವಿಕಸಿತ ಭಾರತಕ್ಕೆ ಬಲ ನೀಡಿದೆ ಎಂದರು.
‘ಏಕ್ ಹೈ ತೋ ಸೇಫ್ ಹೈ’ ಎಂಬ ಘೋಷಣೆಯನ್ನು ಪ್ರಧಾನಿ ಮೋದಿ ಅವರು ಮತ್ತೆ ಮೊಳಗಿಸಿದರು. ಕಾಂಗ್ರೆಸ್ ಮತ್ತು ಅದರ ಕೂಟವು ಎಸ್ಸಿ – ಎಸ್ಟಿ ಸೇರಿದಂತೆ ಸಣ್ಣ ಸಣ್ಣ ಜಾತಿಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದೆ. ಇದನ್ನು ಮಹಾರಾಷ್ಟ್ರದ ಜನರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ ಎಂದರು.
ಕಾಂಗ್ರೆಸ್ ಮತ್ತು ಅದರ ಮಿತ್ರವು ಜಮ್ಮು- ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ಮರಳಿ ತರಲು ಪ್ರಯತ್ನಿಸುತ್ತಿವೆ. ಅಖಂಡ ದೇಶವನ್ನು ಮತ್ತೆ ಇಬ್ಭಾಗ ಮಾಡಲು ಕಾಂಗ್ರೆಸ್ ಯತ್ನಿಸುತ್ತಿದೆ. ಇದಕ್ಕಾಗಿ 370ನೇ ವಿಧಿಯನ್ನು ಮರು ಸ್ಥಾಪಿಸಲು ಬೆಂಬಲಿಸುತ್ತಿದೆ. ಯಾರೇ ಎಷ್ಟೇ ಪ್ರಯತ್ನಿಸಿದರೂ, 370 ನೇ ವಿಧಿಯನ್ನು ಪುನಃ ಸ್ಥಾಪಿಸಲಾಗಲ್ಲ ಎಂದು ಪ್ರಧಾನಿ ಮೋದಿ ಅವರು ಹೇಳಿದರು.