ಹೊಸದಿಂಗತ ಡಿಜಿಟಲ್ ಡೆಸ್ಕ್:
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ (World Test Championship final) ಫೈನಲ್‌ನಲ್ಲಿ ಟೀಮ್ ಇಂಡಿಯಾ ಸೋಲು ಅನುಭವಿಸಿದ್ದು, ಸೋಲಿಗೆ ಕಾರಣವೇನು? ಎಲ್ಲಿ ತಪ್ಪಾಯಿತು ಎಂಬ ಪ್ರಶ್ನೆಗಳಿಗೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಉತ್ತರ ನೀಡಿದ್ದಾರೆ.
ಟೀಂ ಇಂಡಿಯಾದ ಹೀನಾಯ ಸೋಲಿಗೆ ರಾಹುಲ್ ದ್ರಾವಿಡ್ (Rahul Dravid) ತೀವ್ರ ಅಸಮಾಧಾನ ಹೊರಹಾಕಿದ್ದು, ಪಂದ್ಯದ ಮೊದಲ ದಿನವೇ ಟೀಂ ಇಂಡಿಯಾ ಹಿನ್ನಡೆ ಅನುಭವಿಸಿತು. ಅಲ್ಲಿಂದ ತಂಡಕ್ಕೆ ಮತ್ತೆ ಪಂದ್ಯಕ್ಕೆ ಮರಳಲು ಅಸಾಧ್ಯವಾಯಿತು ಎಂದಿದ್ದಾರೆ.
ಸೋಲಿನ ನಂತರ ಮಾತನಾಡಿದ ರಾಹುಲ್ ದ್ರಾವಿಡ್, ಓವಲ್ ವಿಕೆಟ್ ನೋಡಿದರೆ, ಆ ವಿಕೆಟ್ನಲ್ಲಿ ಟೀಂ ಇಂಡಿಯಾ ವೇಗಿಗಳು 469 ರನ್ ಬಿಟ್ಟುಕೊಟ್ಟಿದ್ದು ತೀರ ದುಬಾರಿಯಾಯಿತು . ಅಲ್ಲದೆ ಮೊದಲ ಇನ್ನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಸಾಕಷ್ಟು ರನ್ ಗಳಿಸಿತು. ಈ ಗುರಿ ಬೆನ್ನಟ್ಟಿದ ನಮ್ಮ ತಂಡದ ಬ್ಯಾಟ್ಸ್‌ಮನ್‌ಗಳು ಕೆಟ್ಟ ಹೊಡೆತಗಳನ್ನು ಆಡುತ್ತಾ ತಮ್ಮ ವಿಕೆಟ್‌ಗಳನ್ನು ತೀರ ಅಗ್ಗವಾಗಿ ಕಳೆದುಕೊಂಡರು ಎಂದಿದ್ದಾರೆ.
ಓವಲ್ ವಿಕೆಟ್ ಗಮನಿಸಿದರೆ, ಆಸೀಸ್ ತಂಡವನ್ನು 300 ರನ್ ಒಳಗೆ ಕಟ್ಟಿಹಾಕಬಹುದಾಗಿತ್ತು. ಆದರೆ ಮೊದಲ ಇನ್ನಿಂಗ್ಸ್‌ನಲ್ಲಿ 469 ರನ್ ಬಿಟ್ಟುಕೊಟ್ಟಿದ್ದು, ತುಂಬಾ ದುಬಾರಿಯಾಯಿತು. ಅಲ್ಲದೆ, ಮೊದಲ ದಿನದ ಕೊನೆಯ ಸೆಷನ್‌ನಲ್ಲಿ ಭಾರತ 157 ರನ್‌ಗಳನ್ನು ಬಿಟ್ಟುಕೊಟ್ಟಿತು, ಇದು ತಂಡಕ್ಕೆ ದುಬಾರಿಯಾಯಿತು. ನಮ್ಮ ತಂಡದ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳಿಗೆ ಸಾಕಷ್ಟು ಅವಕಾಶ ನೀಡಿದರು. ಉತ್ತಮ ಲೈನ್ ಅಂಡ್ ಲೆಂಗ್ತ್ನಲ್ಲಿ ಬೌಲಿಂಗ್ ಮಾಡಲಿಲ್ಲ. ಇದರ ಲಾಭ ಪಡೆದ ಟ್ರಾವಿಸ್ ಹೆಡ್ ವೇಗವಾಗಿ ಸ್ಕೋರ್ ಮಾಡಿದರು. ಇದಾದ ಬಳಿಕ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗಳು ನಾಲ್ಕನೇ ದಿನ ಕೆಟ್ಟ ಹೊಡೆತಗಳನ್ನು ಆಡುವ ಮೂಲಕ ವಿಕೆಟ್ ಕಳೆದುಕೊಂಡರು ಎಂದು ದ್ರಾವಿಡ್, ಟೀಂ ಇಂಡಿಯಾದ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದ ವಿರುದ್ಧ ಅಸಮಾಧಾನ ಹೊರಹಾಕಿದರು.
ಇನ್ನು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರವನ್ನು ರಾಹುಲ್ ದ್ರಾವಿಡ್ ಕೂಡ ಸಮರ್ಥಿಸಿಕೊಂಡಿದ್ದು, ಇಂಗ್ಲೆಂಡ್‌ನಲ್ಲಿ ಕಳೆದ ಕೆಲವು ಪಂದ್ಯಗಳನ್ನು ನೋಡುವುದಾದರೆ ಮೊದಲು ಫೀಲ್ಡಿಂಗ್ ಮಾಡಿದ ತಂಡಕ್ಕೆ ಹೆಚ್ಚು ಲಾಭವಾಗಿದೆ. ಇಂಗ್ಲೆಂಡ್‌ನ ಪಿಚ್ ನಂತರ ಬ್ಯಾಟಿಂಗ್‌ಗೆ ಉತ್ತಮವಾಗಿದೆ. ಅಲ್ಲದೆ ಓವಲ್ ಮೈದಾನದಲ್ಲಿ ಮೊದಲ ದಿನ ಮೋಡ ಕವಿದ ವಾತಾವರಣವಿತ್ತು, ಪಿಚ್ ಹಸಿರಿನಿಂದ ಕೂಡಿತ್ತು, ಹೀಗಾಗಿ ಟೀಂ ಇಂಡಿಯಾ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು.
ಇದೆಲ್ಲದ್ದರ ಹೊರತಾಗಿ ಐದನೇ ದಿನ ಗೆಲುವಿನ ನಿರೀಕ್ಷೆಯಲ್ಲಿದ್ದೆ. ಕಳೆದ 2 ವರ್ಷಗಳಲ್ಲಿ ಟೀಂ ಇಂಡಿಯಾ ಇಂತಹ ಟೆಸ್ಟ್ ಪಂದ್ಯಗಳನ್ನು ಗೆದ್ದಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಮತ್ತೊಮ್ಮೆ ಐಸಿಸಿ ಟೂರ್ನಿ ಗೆಲ್ಲುವಲ್ಲಿ ಟೀಂ ಇಂಡಿಯಾ ವಿಫಲವಾಗಿದೆ ಎಂದು ರಾಹುಲ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.