Wednesday, February 8, 2023

Latest Posts

ವಿಜಯ ದಿವಸ್:‌ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದ ರಕ್ಷಣಾ ಸಚಿವ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಶುಕ್ರವಾರ ಇಂದು ವಿಜಯ್ ದಿವಸ್ ಹಿನ್ನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. 1971 ರ ಬಾಂಗ್ಲಾದೇಶ ವಿಮೋಚನಾ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತದ ವಿಜಯವನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಇದಕ್ಕೂ ಮುನ್ನ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಜನರಲ್ ಅನಿಲ್ ಚೌಹಾಣ್, ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ, ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಮತ್ತು ಭಾರತೀಯ ನೌಕಾಪಡೆಯ ಉಪಾಧ್ಯಕ್ಷ ವೈಸ್ ಅಡ್ಮಿರಲ್ ಎಸ್‌ಎನ್ ಘೋರ್ಮಾಡೆ ಅವರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿದರು.

ಐವತ್ತು ವರ್ಷಗಳ ಹಿಂದೆ, ಈ ದಿನವು ಎರಡನೆಯ ಮಹಾಯುದ್ಧದ ನಂತರದ ಅತಿದೊಡ್ಡ ಮಿಲಿಟರಿ ಶರಣಾಗತಿಯನ್ನು ಗುರುತಿಸಿತು. ಪಾಕಿಸ್ತಾನದ ಸೇನೆಯ 93,000 ಸೈನಿಕರು ಭಾರತೀಯ ಪಡೆಗಳ ಮುಂದೆ ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದರು. ಅದನ್ನು ಬಾಂಗ್ಲಾ ವಿಮೋಚನಾ ದಿನ ಎಂತಲೂ ಕರೆಯುತ್ತಾರೆ. ಹೀಗಾಗಿ ಈ ದಿನವನ್ನು ಪ್ರತಿ ವರ್ಷ ‘ವಿಜಯ್ ದಿವಸ್’ ಎಂದು ಗುರುತಿಸಲಾಗುತ್ತದೆ.

ಡಿಸೆಂಬರ್ 16, 1971 ರಂದು, ಲೆಫ್ಟಿನೆಂಟ್ ಜನರಲ್ ಅಮೀರ್ ಅಬ್ದುಲ್ಲಾ ಖಾನ್ ನಿಯಾಜಿ, ಪೂರ್ವ ಪಾಕಿಸ್ತಾನದ ಮುಖ್ಯ ಮಾರ್ಷಲ್ ಲಾ ಅಡ್ಮಿನಿಸ್ಟ್ರೇಟರ್ ಮತ್ತು ಪೂರ್ವ ಪಾಕಿಸ್ತಾನದಲ್ಲಿರುವ ಪಾಕಿಸ್ತಾನ ಸೇನೆಯ ಕಮಾಂಡರ್, ಶರಣಾಗತಿಗೆ ಸಹಿ ಹಾಕಿದರು.
‘ವಿಜಯ್ ದಿವಸ್’ ಮುನ್ನಾದಿನದಂದು ಆರ್ಮಿ ಹೌಸ್‌ನಲ್ಲಿ ನಡೆದ ‘ಅಟ್ ಹೋಮ್’ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಉಪಸ್ಥಿತರಿದ್ದರು. 1971 ರ ಯುದ್ಧದಲ್ಲಿ ಗೆಲುವಿಗೆ ಕಾರಣವಾದ ನಮ್ಮ ಸಶಸ್ತ್ರ ಪಡೆಗಳ ಶೌರ್ಯವನ್ನು ಭಾರತ ಎಂದಿಗೂ ಮರೆಯುವುದಿಲ್ಲ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!