ಕಂಪನಿ ಸೆಕ್ರೆಟರಿಗಳ ಸಮ್ಮೇಳನದಲ್ಲಿ ಬೊಮ್ಮಾಯಿ ಅರ್ಥ ವ್ಯಾಖ್ಯಾನ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಹಳಷ್ಟು ಪುನರಾವರ್ತಿತ ಕಾನೂನು ಕಟ್ಟಲೆಗಳನ್ನು ರದ್ದುಗೊಳಿಸಿ, ದೇಶದ ವಾಣಿಜ್ಯ, ಆರ್ಥಿಕತೆ ಸುಗಮವಾಗಿ ನಡೆಯುವಂತೆ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಂಪನಿ ಸೆಕ್ರಟರಿಗಳ 49ನೇ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಂಸ್ಥೆಯೊಂದನ್ನು ಕಾನೂನಿನ ಚೌಕಟ್ಟಿನೊಳಗೆ ತರುವಲ್ಲಿ ಕಂಪನಿ ಸೆಕ್ರೆಟರಿಗಳು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಕಂಪನಿಗಳ ಹಾಗೂ ಆರ್ಥಿಕತೆಯಲ್ಲಿ ಸ್ಪಷ್ಟ ನಿಯಮಗಳಿದ್ದರೆ ಕಂಪನಿ ಸೆಕ್ರೆಟರಿಗಳ ಆವಶ್ಯಕತೆಯೇ ಇರುತ್ತಿರಲಿಲ್ಲ. ಅನಿಶ್ಚಿತತೆ, ಅಸ್ಪಷ್ಟತೆ ಇರುವಲ್ಲಿಯೇ ಇವರ ಕಾರ್ಯಕ್ಷೇತ್ರವಿರುತ್ತದೆ. ಚಲನಶೀಲತೆ, ಚಂಚಲತೆ ಇಲ್ಲದಿರುವ ಕಂಪನಿಗಳು ಬೆಳೆಯಲು ಸಾಧ್ಯವಿಲ್ಲ. ದೂರದೃಷ್ಟಿ ಹೊಂದಿರುವ ಕಂಪನಿ ಸೆಕ್ರೆಟರಿಗಳು ಸಂಸ್ಥೆಯನ್ನು ಮುನ್ನಡೆಸುತ್ತಾರೆ. ಕಂಪನಿಗಳ ಯಾವುದೇ ಪ್ರಮುಖ ನಿರ್ಧಾರದಲ್ಲಿ ಇವರ ಪಾತ್ರವಿರಬೇಕು ಎಂದರು.

ದೇಶದ ಆರ್ಥಿಕತೆಯ ಬೆಳವಣಿಗೆಗೆ ಕಾರ್ಯನಿರ್ವಹಿಸಿ:
ಇನ್ಸ್ಟಿಟ್ಯೂಟ್ ಆಫ್ ಕಂಪನಿ ಸೆಕ್ರೆಟರೀಸ್ ಆಫ್ ಇಂಡಿಯಾ ಸಂಸ್ಥೆಯು ಉತ್ತಮ ಕೆಲಸ ಮಾಡುತ್ತಿದೆ. ಕಂಪನಿಗಳಲ್ಲಿ ಮಾತ್ರವಲ್ಲ ದೇಶದ ಆರ್ಥಿಕತೆಯ ಬೆಳವಣಿಗೆಯಲ್ಲಿ ಕಂಪನಿ ಸೆಕ್ರೆಟರಿಗಳು ಮಹತ್ವದ ಪಾತ್ರ ವಹಿಸಬೇಕು. ಸಮಾಜದ ಸಮಸ್ಯೆಗಳಿಗೆ ನಿಮ್ಮ ಮುಖಾಂತರ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಆಲೋಚನೆ ಮಾಡಿ ಪರಿಹಾರದ ಭಾಗವಾಗಬೇಕು. ಕಂಪನಿ ಸೆಕ್ರೆಟರಿಗಳು ಆರ್ಥಿಕತೆಯ ಒಂದು ಭಾಗವಾಗಬೇಕು. ನಾಯಕತ್ವ ವಹಿಸುವ ಮೂಲಕ ಬದಲಾವಣೆಯನ್ನು ತನ್ನಿ ಎಂದು ಸಿಎಂ ಕರೆ ನೀಡಿದರು.

ನಾವು ಅಭಿವೃದ್ಧಿಯ ಭಾಗವಾಗಬೇಕು:
ಹಣಕಾಸು ಕೇವಲ ಲಾಭ, ನಷ್ಟದ ವಿಚಾರವಲ್ಲ. ಮತ್ತು ತತ್ವಶಾಸ್ತ್ರ ಕೇವಲ ಪಾಪ ಪುಣ್ಯಕ್ಕೆ ಸಂಬಂಧಿಸಿದ್ದಲ್ಲ. ಆರ್ಥಿಕತೆಯಲ್ಲಿ ಪಾಪ ಪುಣ್ಯವನ್ನು ಹಾಗೂ ತತ್ವಶಾಸ್ತ್ರದಲ್ಲಿ ಲಾಭ ನಷ್ಟವನ್ನು ನೋಡಬೇಕು. ವ್ಯವಸ್ಥೆಯೊಂದರ ಭಾಗವಾಗಿರುವ ನಾವು ಅದರ ಎಲ್ಲಾ ಚಟುವಟಿಕೆಗಳಲ್ಲಿ ತೊಡಗಿಕೊಂಡು ಅಭಿವೃದ್ಧಿಯ ಭಾಗವಾಗಬೇಕು. ಸಾಕಷ್ಟು ಕಂಪನಿಗಳು ಲಾಭ ಮಾಡುವುದರ ಭರದಲ್ಲಿ ಕಾನೂನನ್ನು ಉಲ್ಲಂಘಿಸುತ್ತಾರೆ. ಇದನ್ನು ಸರಿಪಡಿಸಲು ಕಂಪನಿ ಸೆಕ್ರೆಟರಿಗಳು ಅತ್ಯಗತ್ಯ. ಫಲಿತಾಂಶಗಳನ್ನು ಕಾಣಲು ನಿಮ್ಮದೇ ದಾರಿಯನ್ನು ಹುಡುಕಿಕೊಳ್ಳಬೇಕು. ನಿಮ್ಮಲ್ಲಿ ಬದಲಾವಣೆಯಾದರೆ, ಕಂಪನಿಗಳಲ್ಲಿ ಬದಲಾವಣೆಯಾಗುತ್ತದೆ. ಕಂಪನಿಗಳಲ್ಲಿ ಬದಲಾವಣೆಯಾದರೆ ಆರ್ಥಿಕತೆಯಲ್ಲಿ ಹಾಗೂ ಆರ್ಥಿಕತೆಯಲ್ಲಿ ಬದಲಾವಣೆಯಾದರೆ ಸಾಮಾನ್ಯ ವ್ಯಕ್ತಿಯ ಬದುಕಿನಲ್ಲಿಯೂ ಬದಲಾವಣೆ ತರಬಹುದು ಎಂದರು.

ಕಂಪನಿ ಸೆಕ್ರೆಟರಿಗಳು ಸಾಮಾನ್ಯ ವ್ಯಕ್ತಿಯೊಂದಿಗೆ ನೇರವಾಗಿ ಸಂಬಂಧವನ್ನು ಹೊಂದಿದ್ದೀರಿ ಎಂದ ಸಿಎಂ ಬೊಮ್ಮಾಯಿ, ಕಂಪನಿ ಸೆಕ್ರೆಟರಿಗಳ ಮೂಲಭೂತ ವಿಚಾರಗಳು ಸ್ಪಷ್ಟವಾಗಿದ್ದರೆ, ಕಂಪನಿಗಳಿಗೆ ಲಾಭ. ಕಂಪನಿಗಳಲ್ಲಿ ದಕ್ಷತೆ ಹಾಗೂ ಸಮಾನತೆ ಅಗತ್ಯ. ಸಮಾಜ ಎಲ್ಲರನ್ನೂ ಒಳಗೊಳ್ಳುವ ಅಗತ್ಯವಿದೆ. ಪಿರಮಿಡ್‍ನ ತಳಹಂತದಲ್ಲಿ ಕೆಲಸ ಮಾಡುವವರು ಆರ್ಥಿಕತೆಯನ್ನು ಮುನ್ನಡೆಸುತ್ತಾರೆ. ಪಿರಮಿಡ್ಡಿನ ತಳಹಂತದಲ್ಲಿರುವವರು ಅದರ ಮೇಲಿರುವವ ಬದುಕನ್ನು ಬದಲಾಯಿಸುತ್ತಾರೆ. ನಿಮ್ಮ ಕಂಪನಿಗಳು ಕಟ್ಟ ಕಡೆಯ ವ್ಯಕಿಗೆ ಏನು ಮಾಡುತ್ತಿದೆ ಎಂದು ಪ್ರಶ್ನಿಸಿಕೊಳ್ಳಬೇಕು. ಒಟ್ಟಾಗಿ ಆಲೋಚಿಸಿದರೆ ನಮ್ಮ ದೇಶದ ದಿಕ್ಕನ್ನು ಬದಲಿಸಲು ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.

ಐ.ಸಿ.ಎಸ್.ಐ. ಅಧ್ಯಕ್ಷ ನಾಗೇಂದ್ರ ಡಿ.ರಾವ್, ಉಪಾಧ್ಯಕ್ಷ ದೇವೇಂದ್ರ ವಿ.ದೇಶಪಾಂಡೆ, ಕಾರ್ಯದರ್ಶಿ ಆಶಿಶ್ ಮೋಹನ್ ಮೊದಲಾದವರು ಉಪಸ್ಥಿತರಿದ್ದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!