August 18, 2026
Tuesday, August 18, 2026
spot_img

ಭಾರೀ ಮಳೆಗೆ ತತ್ತರಿಸಿದ ಡೆಹ್ರಡೂನ್: 97 ರಸ್ತೆಗಳು ಬಂದ್, ಶಾಲೆಗಳಿಗೆ ರಜೆ ಘೋಷಣೆ

ಹೊಸದಿಗಂತ ಡೆಡಿಜಿಟಲ್‌ ಡೆಸ್ಕ್:

ಉತ್ತರಾಖಂಡದ ರಾಜಧಾನಿ ಡೆಹ್ರಡೂನ್ ಸೇರಿದಂತೆ ರಾಜ್ಯಾದ್ಯಂತ ಸೋಮವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ತತ್ತರಿಸಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾಡಳಿತವು ಮಂಗಳವಾರ (ಆಗಸ್ಟ್ 18) ಡೆಹ್ರಡೂನ್ ಜಿಲ್ಲೆಯ 1 ರಿಂದ 12 ನೇ ತರಗತಿಯವರೆಗಿನ ಎಲ್ಲಾ ಶಾಲೆಗಳು ಮತ್ತು ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಿದೆ.

ಆಗಸ್ಟ್ 21 ರವರೆಗೆ ಯೆಲ್ಲೋ ಅಲರ್ಟ್

ರಾಜ್ಯದಲ್ಲಿ ಆಗಸ್ಟ್ 21 ರವರೆಗೆ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಗರ್ವಾಲ್ ಪ್ರದೇಶದ ಗುಡ್ಡಗಾಡು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ‘ಯೆಲ್ಲೋ ಅಲರ್ಟ್’ ಘೋಷಿಸಿದೆ. ತಗ್ಗು ಪ್ರದೇಶಗಳಲ್ಲಿ ಜಲಾವೃತ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭೂಕುಸಿತದ ಭೀತಿ ಎದುರಾಗಿದೆ. ಇತ್ತೀಚೆಗಷ್ಟೇ ಮಸೂರಿ-ಡೆಹ್ರಡೂನ್ ರಸ್ತೆಯಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

97 ಪ್ರಮುಖ ರಸ್ತೆಗಳು ಬಂದ್

ಧಾರಾಕಾರ ಮಳೆ ಮತ್ತು ಭೂಕುಸಿತದ ಅವಶೇಷಗಳಿಂದಾಗಿ ಉತ್ತರಾಖಂಡದಾದ್ಯಂತ ಸದ್ಯ 97 ರಸ್ತೆಗಳು ಸಂಪೂರ್ಣ ಬಂದ್ ಆಗಿವೆ. ಇತ್ತೀಚೆಗೆ ಚಮೋಲಿ ಜಿಲ್ಲೆಯ ನಿರ್ಮಾಣ ಹಂತದ ಸುರಂಗವೊಂದಕ್ಕೆ ಮಣ್ಣು ನುಗ್ಗಿ ಏಳು ಕಾರ್ಮಿಕರು ಸಾವನ್ನಪ್ಪಿದ್ದರು. ಈಗ ರಸ್ತೆಗಳ ಮೇಲಿನ ಅವಶೇಷಗಳನ್ನು ತೆರವುಗೊಳಿಸಲು ವಿಪತ್ತು ನಿರ್ವಹಣಾ ಸಂಸ್ಥೆಗಳು ಶ್ರಮಿಸುತ್ತಿವೆ. ಯಮುನೋತ್ರಿ ಮಾರ್ಗವೂ ಹಾನಿಗೊಳಗಾಗಿದ್ದು, ಐದು ಜಿಲ್ಲೆಗಳಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ.

ಉಕ್ಕಿ ಹರಿಯುತ್ತಿರುವ ತಮ್ಸಾ ನದಿ, ಪ್ರವಾಹದ ಭೀತಿ

ನಿರಂತರ ಮಳೆಯಿಂದಾಗಿ ಐತಿಹಾಸಿಕ ತಪ್ಕೇಶ್ವರ ಮಹಾದೇವ ದೇವಾಲಯದ ಸಮೀಪ ಹರಿಯುವ ತಮ್ಸಾ ನದಿಯ ನೀರಿನ ಮಟ್ಟ ಹೆಚ್ಚಾಗಿದೆ. ನದಿ ಪಾತ್ರದಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಜಿಲ್ಲಾಡಳಿತವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.

ಇದನ್ನೂ ಓದಿ:

ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ

ಹವಾಮಾನ ವೈಪರೀತ್ಯದ ಕಾರಣ ಚಾರ್ ಧಾಮ್ ಯಾತ್ರಿಕರು ಹಾಗೂ ಪ್ರವಾಸಿಗರು ಹವಾಮಾನ ವರದಿಯನ್ನು ನೋಡಿ ಪ್ರಯಾಣ ಬೆಳೆಸುವಂತೆ ಸೂಚಿಸಲಾಗಿದೆ. ನದಿ ಮತ್ತು ತೊರೆಗಳಲ್ಲಿ ನೀರಿನ ಮಟ್ಟ ವೇಗವಾಗಿ ಹೆಚ್ಚುತ್ತಿರುವುದರಿಂದ ಸಾರ್ವಜನಿಕರು ಜಲಮೂಲಗಳಿಂದ ದೂರವಿರಲು ಮತ್ತು ಅನಗತ್ಯ ಪ್ರಯಾಣವನ್ನು ತಪ್ಪಿಸಲು ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !