ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿಯಲ್ಲಿ ಶುಕ್ರವಾರ ಸಂಜೆ ಧೂಳು ಮಿಶ್ರಿತ ಭಾರಿ ಬಿರುಗಾಳಿ ಬೀಸಿದ ಪರಿಣಾಮ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ ಉಂಟಾಗಿದೆ. ವಿಮಾನಗಳ ಹಾರಾಟದಲ್ಲಿ ತೊಂದರೆ ಉಂಟಾಗಿದ್ದರಿಂದ ನಗರಕ್ಕೆ ಹೋಗುವ ಮತ್ತು ಅಲ್ಲಿಂದ ಬರುವ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು.
ಪ್ರತಿಕೂಲ ಹವಾಮಾನದಿಂದಾಗಿ ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗ್ಗೆವರೆಗೆ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯನಿರ್ವಹಿಸುತ್ತಿದ್ದ 50ಕ್ಕೂ ಹೆಚ್ಚು ದೇಶೀಯ ವಿಮಾನಗಳು ವಿಳಂಬವಾಗಿವೆ. ಸುಮಾರು 25 ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಧೂಳಿನ ಭಾರೀ ಬಿರುಗಾಳಿಯಿಂದಾಗಿ ಏಳು ವಿಮಾನಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಮತ್ತು ವಿಮಾನ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಅರ್ಥೈಸುವ ಮೂಲಕ ಪ್ರಯಾಣಿಕರತ್ತ ಗಮನ ಹರಿಸಿದ್ದಾರೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.