ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಪಿಎಲ್ 2026ರ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ಭೀಕರ ಅವಘಡವೊಂದು ಸಂಭವಿಸಿದೆ. ಡೆಲ್ಲಿ ತಂಡದ ಪ್ರಮುಖ ವೇಗಿ ಲುಂಗಿ ಎನ್ಗಿಡಿ ಅವರು ಫೀಲ್ಡಿಂಗ್ ವೇಳೆ ತೀವ್ರವಾಗಿ ಗಾಯಗೊಂಡಿದ್ದು, ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂದ್ಯದ ವೇಳೆ ಪಂಜಾಬ್ ಕಿಂಗ್ಸ್ ಬ್ಯಾಟರ್ ಪ್ರಿಯಾಂಶ್ ಆರ್ಯ ನೀಡಿದ ಕ್ಯಾಚ್ ಅನ್ನು ಹಿಡಿಯಲು ಎನ್ಗಿಡಿ ಅವರು ಓಡುತ್ತಾ ಹೋದರು. ಈ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ನೆಲಕ್ಕೆ ಬಿದ್ದು ಅವರ ತಲೆಗೆ ಜೋರಾದ ಪೆಟ್ಟು ಬಿತ್ತು. ತಲೆ ನೆಲಕ್ಕೆ ಅಪ್ಪಳಿಸಿದ ತೀವ್ರತೆಗೆ ಅವರು ಮೈದಾನದಲ್ಲೇ ನರಳಾಡತೊಡಗಿದರು. ತಕ್ಷಣವೇ ಪಂದ್ಯವನ್ನು ಸ್ಥಗಿತಗೊಳಿಸಿ ಡೆಲ್ಲಿ ತಂಡದ ಫಿಸಿಯೋ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ, ಅವರು ಚೇತರಿಸಿಕೊಳ್ಳಲಿಲ್ಲ.
ಆರಂಭದಲ್ಲಿ ಎನ್ಗಿಡಿ ಅವರನ್ನು ಸ್ಟ್ರೆಚರ್ ಮೂಲಕ ಡಗೌಟ್ಗೆ ಕರೆದೊಯ್ಯಲು ಪ್ರಯತ್ನಿಸಲಾಯಿತು. ಆದರೆ ಗಾಯದ ತೀವ್ರತೆ ಹೆಚ್ಚಿದ್ದರಿಂದ ಮತ್ತು ಅವರು ಚಲಿಸಲು ಅಸಾಧ್ಯವಾಗಿದ್ದರಿಂದ, ಕೂಡಲೇ ಮೈದಾನಕ್ಕೆ ಆಂಬುಲೆನ್ಸ್ ಅನ್ನು ತರಲಾಯಿತು. ಸದ್ಯ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಕ್ಯಾನಿಂಗ್ ವರದಿಗಾಗಿ ಕಾಯಲಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದು ಎರಡನೇ ದೊಡ್ಡ ಹಿನ್ನಡೆಯಾಗಿದೆ. ಈ ಪಂದ್ಯಕ್ಕೆ ಒಂದು ದಿನ ಮೊದಲಷ್ಟೇ ಅಭ್ಯಾಸದ ವೇಳೆ ತಂಡದ ಯುವ ಆಟಗಾರನ ಮುಖಕ್ಕೆ ಚೆಂಡು ಬಡಿದು ಆಸ್ಪತ್ರೆ ಸೇರಿದ್ದರು. ಈಗ ಎನ್ಗಿಡಿ ಅವರ ಗಾಯವು ತಂಡದ ಬೌಲಿಂಗ್ ವಿಭಾಗಕ್ಕೆ ಆತಂಕ ತಂದಿದೆ. ಎನ್ಗಿಡಿ ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರ ಕೋಟ್ಯಂತರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.
ಪ್ರಸ್ತುತ ಎನ್ಗಿಡಿ ಅವರ ಸ್ಥಿತಿ ಸ್ಥಿರವಾಗಿದೆಯೇ ಅಥವಾ ಅವರು ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿಯಬೇಕೇ ಎಂಬುದು ವೈದ್ಯಕೀಯ ವರದಿ ಬಂದ ಬಳಿಕವಷ್ಟೇ ಅಧಿಕೃತವಾಗಿ ತಿಳಿಯಲಿದೆ.



