ಹೊಸದಿಗಂತ ಡಿಜಿಟಲ್ ಡೆಸ್ಕ್:
ದಿಲ್ಲಿಯ ಮಹಿಳೆಯರಿಗೆ ಬಿಜೆಪಿ ನೇತೃತ್ವದ ಸರ್ಕಾರ ಗುಡ್‌ನ್ಯೂಸ್ ನೀಡಿದೆ ಶನಿವಾರ (ಮಾ. 8) ರಾಜ್ಯ ಸರ್ಕಾರ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ನೀಡುವ ಮಹಿಳಾ ಸಮೃದ್ಧಿ ಯೋಜನೆ ಗೆ 5,100 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಅನುಮೋದನೆ ನೀಡಿದೆ.
ಈ ಮೂಲಕ ಮುಖ್ಯಮಂತ್ರಿ ರೇಖಾ ಗುಪ್ತಾ ದಿಲ್ಲಿ ವಿಧಾನಸಭಾ ಚುನಾವಣೆ ವೇಳೆ ನೀಡಿದ್ದ ಭರವಸೆಯನ್ನು ಈಡೇರಿಸಲು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಇವತ್ತು ಮಹಿಳಾ ದಿನಾಚರಣೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹಿಳಾ ಸಮೃದ್ಧಿ ಯೋಜನೆಗೆ ಅನುಮೋದನೆ ನೀಡಲಾಗಿದೆ. ಅರ್ಹ ಮಹಿಳೆಗೆ ಪ್ರತಿ ತಿಂಗಳು 2,500 ರೂ. ನೀಡುವ ಯೋಜನೆ ಇದಾಗಿದೆ. ಈ ಮೂಲಕ ಚುನಾವಣೆ ವೇಳೆ ನೀಡಿದ್ದ ಭರವಸೆ ಈಡೇರಿಸಲು ಮುಂದಾಗಿದ್ದೇವೆʼ ಎಂದು ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.
ಯೋಜನೆಯ ಅನುಷ್ಠಾನಕ್ಕಾಗಿ ನಾವು 5,100 ಕೋಟಿ ರೂ. ಒದಗಿಸಿದ್ದೇವೆ. ಇದಕ್ಕಾಗಿ ಸಮಿತಿಯನ್ನು ರಚಿಸಿದ್ದೇವೆ. ಯೋಜನೆಯ ನೋಂದಣಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇದಕ್ಕಾಗಿ ಶೀಘ್ರದಲ್ಲೇ ಪೋರ್ಟಲ್ ತೆರೆಯಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸಮಿತಿಯಲ್ಲಿ ಯಾರೆಲ್ಲ ಇರುತ್ತಾರೆ?
ಯೋಜನೆಯ ಅನುಷ್ಠಾನಕ್ಕಾಗಿ ರೇಖಾ ಗಪ್ತಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಚಿವರಾದ ಆಶೀಷ್ ಸೂದ್, ಪರ್ವೇಶ್ ವರ್ಮಾ ಮತ್ತು ಕಪಿಲ್ ಮಿಶ್ರಾ ಇರಲಿದ್ದಾರೆ.
ಸಭೆಯ ಬಳಿಕ ಮಾತನಾಡಿದ ಆಶೀಷ್ ಸೂದ್, ‘ʼಇಂದು ದಿಲ್ಲಿ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇದು ಬಾಯಿ ಮಾತಿನ ಸರ್ಕಾರವಲ್ಲ. ಸದ್ಯದಲ್ಲೇ ನಾವು ಯೋಜನೆಗೆ ಅಗತ್ಯವಾದ ಅನುದಾನ ಒದಗಿಸಲಿದ್ದೇವೆ ಮತ್ತು ಹೆಸರು ನೋಂದಣಿಯ ಪೋರ್ಟಲ್ ಅನ್ನು ಶೀಘ್ರದಲ್ಲೇ ತೆರೆಯಲಾಗುತ್ತದೆ’ ಎಂದು ತಿಳಿಸಿದ್ದಾರೆ.