ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ದಿಲ್ಲಿ ಸಿಎಂ ಸ್ಥಿತಿ: ಕೇಜ್ರಿವಾಲ್ ನಡೆಗೆ ಅಣ್ಣಾ ಹಜಾರೆ ನೋವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಬಕಾರಿ ನೀತಿ ರೂಪಿಸದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ಗೆ ಈ ಹಿಂದೆಯೇ ಎಚ್ಚರಿಸಿದೆ. ಅವರ ನಿರ್ಲಕ್ಷ ಧೋರಣೆಯೇ ಇಂದು ಅವರಿಗೆ ಮುಳುವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹೇಳಿದ್ದಾರೆ.

ಮಹಾರಾಷ್ಟ್ರದ ತಮ್ಮ ಹಳ್ಳಿ ರಾಲೇಗಾಂವ್ ಸಿದ್ಧಿಯಲ್ಲಿ ಮಾತನಾಡಿದ ಅವರು, ಅಬಕಾರಿ ನೀತಿ ರೂಪಿಸುವುದು ನಮ್ಮ ಕೆಲಸವಲ್ಲ. ಮದ್ಯ ಕೆಟ್ಟದ್ದು ಎಂದು ಚಿಕ್ಕ ಮಕ್ಕಳಿಗೂ ಗೊತ್ತು. ಈ ಅಬಕಾರಿ ನೀತಿ ವಿವಾದದಿಂದ ಹಿಂದೆ ಸರಿಯಬೇಕು ಎಂದು ಅವರಿಗೆ ಸಲಹೆ ನೀಡಿದ್ದೆ. ಆದರೂ ಅವರು ನೀತಿ ರೂಪಿಸಿಯೇ ಬಿಟ್ಟರು. ಇದು ಇಂದು ಅವರಿಗೆ ಮುಳುವಾಗಿದೆ ಎಂದರು.

ಅಬಕಾರಿ ನೀತಿ ಜಾರಿಯಿಂದ ಹೆಚ್ಚು ಆದಾಯ ಬರಲಿದೆ ಎಂದು ಕೇಜ್ರಿವಾಲ್ ಭಾವಿಸಿದ್ದರು. ಈ ಬೆಳವಣಿಗೆಯಿಂದ ನೊಂದು ಎರಡು ಬಾರಿ ಅವರಿಗೆ ಪತ್ರ ಬರೆದಿದ್ದೆ. ಅಂದು ನನ್ನ ಜೊತೆ ಮದ್ಯದ ವಿರುದ್ಧ ಧ್ವನಿ ಎತ್ತಿದ್ದ ವ್ಯಕ್ತಿಯೇ ಇಂದು ಅಬಕಾರಿ ನೀತಿ ಮಾಡುತ್ತಿದ್ದಾರೆ ಎಂದು ತಿಳಿದಾಗ ಮನಸ್ಸಿಗೆ ಬಹಳ ನೋವಾಗಿತ್ತು. ಅವರು ಏನೂ ತಪ್ಪು ಮಾಡದಿದ್ದರೆ ಬಂಧನದ ಅಗತ್ಯ ಬರುತ್ತಿರಲಿಲ್ಲ. ಈಗ ಕಾನೂನು ಮತ್ತು ಸರ್ಕಾರ ಏನು ಮಾಡಬೇಕೊ ಅದನ್ನು ಮಾಡುತ್ತದೆ ಎಂದು ಅಣ್ಣ ಪ್ರತಿಕ್ರಿಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!