Tuesday, March 28, 2023

Latest Posts

ವಿಚಾರಣೆಗೆ ಹಾಜರಾದ ಸಿಸೋಡಿಯಾ: ಜೈಲುಪಾಲಾಗ್ತಾರಾ ಡಿಸಿಎಂ? ಸಿಎಂ ಕೇಜ್ರಿವಾಲ್ ಕುತೂಹಲಕಾರಿ ಟ್ವೀಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ದೆಹಲಿ ಮದ್ಯ ಹಗರಣದ ತನಿಖೆಯ ಭಾಗವಾಗಿ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಭಾನುವಾರ ವಿಚಾರಣೆ ನಡೆಸುತ್ತಿದ್ದಾರೆ. ಸಿಸೋಡಿಯಾ ಸಿಬಿಐ ತನಿಖೆಗೆ ಹಾಜರಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದಾರೆ. ಸಿಬಿಐ ಕೇಂದ್ರ ಕಚೇರಿಗೆ ಹೋಗುವ ಎಲ್ಲಾ ಮಾರ್ಗಗಳಲ್ಲಿ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗಿದೆ. ಅಲ್ಲದೆ, ಕಚೇರಿಯಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.

ಸಿಸೋಡಿಯಾ ಅವರ ವಿಚಾರಣೆ ವೇಳೆ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಸಿಬಿಐ ಕಚೇರಿ ಬಳಿ ಪ್ರತಿಭಟನೆ ನಡೆಸುವ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳೀಯ ಪೊಲೀಸರು ಮತ್ತು ಅರೆಸೇನಾ ಪಡೆಗಳನ್ನು ನಿಯೋಜಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ತನಿಖೆಯ ನಂತರ ಸಿಸೋಡಿಯಾ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹರಿದಾಡುತ್ತಿದೆ.

ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಈಗಾಗಲೇ ಸಿಬಿಐ ಕಚೇರಿ ತಲುಪಿದ್ದು, ವಿಚಾರಣೆಗೆ ಹಾಜರಾಗಿದ್ದಾರೆ. ವಿಚಾರಣೆ ಬಳಿಕ ಆತನನ್ನು ಬಂಧಿಸಲಾಗುತ್ತದೆ ಎಂಬ ಪ್ರಚಾರವೂ ಜೋರಾಗಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಸಕ್ತಿದಾಯಕ ಟ್ವೀಟ್ ಮಾಡಿದ್ದಾರೆ. ʻದೇವರು ನಿಮ್ಮೊಂದಿಗಿದ್ದಾನೆ ಮನೀಶ್. ನಿಮಗೆ ಲಕ್ಷಾಂತರ ಮಕ್ಕಳ ಮತ್ತು ಅವರ ಪೋಷಕರ ಆಶೀರ್ವಾದವಿದೆ. ದೇಶ ಮತ್ತು ಸಮಾಜಕ್ಕಾಗಿ ಜೈಲಿಗೆ ಹೋಗುವುದ ಕೆಟ್ಟದ್ದು ಅನಿಸಲ್ಲ. ನೀವು ಬೇಗ ಜೈಲಿನಿಂದ ಹಿಂತಿರುಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಟ್ವೀಟ್ ಮಾಡಿದ್ದಾರೆ. ಕೇಜ್ರಿವಾಲ್ ಟ್ವೀಟ್ ಮೂಲಕ ಸಿಸೋಡಿಯಾ ಬಂಧನ ಖಚಿತ ಎಂಬ ವಾದ ದೆಹಲಿ ರಾಜಕೀಯದಲ್ಲಿ ಕೇಳಿ ಬರುತ್ತಿದೆ.

ವಿಚಾರಣೆ ಹಿನ್ನೆಲೆ ಸಿಸೋಡಿಯಾ ಮನೆಯ ಹೊರಗೆ ಬಿಗಿ ಭದ್ರತೆ ಏರ್ಪಡಿಸಲಾಗಿದೆ. ಮನೆಯ ಪ್ರವೇಶ ದ್ವಾರದ ಎರಡೂ ಬದಿಗಳಲ್ಲಿ ನಾಲ್ಕು ಪದರಗಳ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಭಾನುವಾರ ಬೆಳಗ್ಗೆ ಸಿಬಿಐ ಕಚೇರಿಗೆ ತೆರಳುವ ಮುನ್ನ ಮನೀಶ್ ಸಿಸೋಡಿಯಾ ಕುತೂಹಲಕಾರಿ ಟ್ವೀಟ್ ಮಾಡಿದ್ದಾರೆ. ಇಂದು ಮತ್ತೊಮ್ಮೆ ಸಿಬಿಐ ವಿಚಾರಣೆಗೆ ಹಾಜರಾಗುತ್ತಿದ್ದೇನೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ. ಇನ್ನು ಕೆಲವು ತಿಂಗಳು ಜೈಲಿನಲ್ಲಿ ಕಳೆಯುವುದು ನನಗಿಷ್ಟವಿಲ್ಲ. ನಾನು ಭಗತ್ ಸಿಂಗ್ ಅವರ ಅನುಯಾಯಿ” ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!