ದೆಹಲಿ ಗ್ಯಾಸ್ ಚೇಂಬರ್‌ ಆಗುತ್ತಿದೆ ಆದರೆ ಸಿಎಂ ಕೇಜ್ರಿವಾಲ್ ರಾಜಕೀಯ ಪ್ರವಾಸದಲ್ಲಿ ಬ್ಯುಸಿ: ಬಿಜೆಪಿ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟವು ಕುಸಿಯುತ್ತಿದೆ. ದೆಹಲಿಯಲ್ಲಿನ ಗಾಳಿಯ ಗುಣಮಟ್ಟವು ಭಾನುವಾರದಂದು ‘ಅತ್ಯಂತ ಕಳಪೆ’ ವಿಭಾಗದಲ್ಲಿದೆ ಎನ್ನಲಾಗಿದ್ದು ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 350 ರಷ್ಟಿದೆ.

ಕುಸಿಯುತ್ತಿರುವ ವಾಯು ಗುಣಮಟ್ಟದ ಬಗ್ಗೆ ಎಎಪಿ ಮತ್ತು ಬಿಜೆಪಿ ನಡುವಿನ ಮಾತಿನ ಯುದ್ಧ ಪ್ರಾರಂಭವಾಗಿದ್ದು ರಾಷ್ಟ್ರ ರಾಜಧಾನಿಯಲ್ಲಿ ಹದಗೆಟ್ಟ ಗಾಳಿಯ ಗುಣಮಟ್ಟಕ್ಕೆ ಎರಡೂ ಕಡೆಯವರು ಪರಸ್ಪರರನ್ನು ಹೊಣೆಯನ್ನಾಗಿಸಿದ್ದಾರೆ. ಗಾಳಿಯ ಗುಣಮಟ್ಟ ದಿನದದಿಂದ ಕುಸಿಯುತ್ತಿದ್ದರೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಗಮನ ಹರಿಸುತ್ತಿಲ್ಲ. ಅವರು ರಾಜಕೀಯ ಪ್ರವಾಸದಲ್ಲಿ ನಿರತರಾಗಿದ್ದಾರೆ ಎಂದು ದೆಹಲಿ ಬಿಜೆಪಿ ಘಟಕವು ಆರೋಪಿಸಿದೆ.

ದೆಹಲಿಗೆ ಪೂರ್ಣಾವಧಿ ಮುಖ್ಯಮಂತ್ರಿ ಬೇಕು. ಪಾರ್ಟ್ ಟೈಮ್ ಅಲ್ಲ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ ಎಂದು ಮೂಲಗಳು ವರದಿ ಮಾಡಿವೆ. “ಮಾಲಿನ್ಯ ಹೆಚ್ಚಾದಂತೆ, ಸಿಎಂ ಕೇಜ್ರಿವಾಲ್ ಛಠ್ ಪೂಜೆಗೆ ತಯಾರಿ ನಡೆಸಲು ದೆಹಲಿಯಲ್ಲಿಯೇ ಇರಬೇಕಿತ್ತು, ಬದಲಿಗೆ ಅವರು ಗುಜರಾತ್ ಪ್ರವಾಸ ಮಾಡುತ್ತಿದ್ದಾರೆ. ಅದರಿಂದ ಇಲ್ಲಿನ ಭಕ್ತರಿಗೆ ಅನುಕೂಲವಾಗುವುದಿಲ್ಲ, ಅವರಿಗೆ ದೆಹಲಿಯ ಬಗ್ಗೆ ಕಾಳಜಿ ಇಲ್ಲದಿದ್ದರೆ, ಅವರು ಪಂಜಾಬ್‌ಗೆ ಹೋಗಿ ಅಲ್ಲಿ ಸಿಎಂ ಆಗಬೇಕು’’ ಎಂದು ಬಿಜೆಪಿಯ ಹರೀಶ್‌ ಖುರಾನಾ ಹೇಳಿದ್ದಾರೆ.

ಮತ್ತೊಂದೆಡೆ, ದೆಹಲಿಯ AQI ಅನ್ನು ಪರಿಶೀಲಿಸಲು ಕಟ್ಟುನಿಟ್ಟಾದ ಕ್ರಿಯಾ ಯೋಜನೆಯನ್ನು ರೂಪಿಸಲು ಪರಿಸರ ಸಚಿವ ಗೋಪಾಲ್ ರೈ ಅವರು ಉನ್ನತ ಮಟ್ಟದ ಸಭೆಗೆ ಕರೆ ನೀಡಿದ್ದಾರೆ ಎನ್ನಲಾಗಿದೆ. AQI ‘ತೀವ್ರ’ ವರ್ಗಕ್ಕೆ ಜಾರಿದ ನಂತರ ಶನಿವಾರ ಸಂಜೆ ರಾಷ್ಟ್ರ ರಾಜಧಾನಿಯಲ್ಲಿ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗಿದ್ದು ಅಧಿಕೃತ ಅಧಿಸೂಚನೆಯ ಪ್ರಕಾರ, ಮುಂದಿನ ಆದೇಶದವರೆಗೆ ದೆಹಲಿಯಲ್ಲಿ (ಅಗತ್ಯ ಯೋಜನೆಗಳನ್ನು ಹೊರತುಪಡಿಸಿ) ನಿರ್ಮಾಣ ಕಾರ್ಯ ಮತ್ತು ನೆಲಸಮ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ವರದಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!