ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿ ವಾಯುಮಾಳಿನ್ಯದಿಂದಾಗಿ ಗಾಳಿಯ ಗುಣಮಟ್ಟವು ದಿನದಿಂದ ದಿನಕ್ಕೆ ಕುಸಿಯುತ್ತಿದ್ದು ದೆಹಲಿ-ಎನ್‌ಸಿಆರ್‌ನ ಶೇ.80 ರಷ್ಟು ಕುಟುಂಬಗಳು ಕನಿಷ್ಠ ಒಬ್ಬ ಸದಸ್ಯರಾದರೂ ವಾಯು ಮಾಲಿನ್ಯ ಸಂಬಂಧಿತ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಸಾಮಾಜಿಕ ಮಾಧ್ಯಮ ವೇದಿಕೆಯಾದ ಲೋಕಲ್ ಸರ್ಕಲ್ಸ್ ಭಾನುವಾರ ನಡೆಸಿದ ಸಮೀಕ್ಷೆಯಲ್ಲಿ ಈ ಆತಂಕಕಾರಿ ಅಂಶವನ್ನು ಹೊರಹಾಕಿದೆ.
ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವು ಪ್ರಸ್ತುತ “ಅತ್ಯಂತ ಕಳಪೆ” ಮತ್ತು “ತೀವ್ರ” ವರ್ಗಗಳ ನಡುವೆ ತೂಗಾಡುತ್ತಿದೆ. ವಿಷಪೂರಿತ ಗಾಳಿಯು ಆರೋಗ್ಯದ ಅಪಾಯಗಳನ್ನು ಉಂಟುಮಾಡುತ್ತದೆ ಎನ್ನಲಾಗಿದೆ.
ಸುಮಾರು 18 ಪ್ರತಿಶತದಷ್ಟು ಜನರು ತಾವು ಅಥವಾ ಅವರ ಕುಟುಂಬ ಸದಸ್ಯರು ಈಗಾಗಲೇ ವೈದ್ಯರು ಅಥವಾ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಸೂಚಿಸಿದ್ದಾರೆ ಎಂದು ಸಮೀಕ್ಷೆ ಹೇಳಿದೆ. ಸುಮಾರು 22 ಪ್ರತಿಶತದಷ್ಟು ಜನರು ತಮ್ಮ ಕುಟುಂಬದಲ್ಲಿ ಒಬ್ಬರು ಅಥವಾ ಹೆಚ್ಚಿನ ಸದಸ್ಯರು ಈಗಾಗಲೇ ವೈದ್ಯರೊಂದಿಗೆ ಮಾತನಾಡಿದ್ದಾರೆ ಅಥವಾ ಅವರೊಂದಿಗೆ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಒಟ್ಟೂ 8,097 ಪ್ರತಿಕ್ರಿಯಿಸಿದ್ದು ಅದರಲ್ಲಿ, 69 ಪ್ರತಿಶತ ಜನರು ನೋಯುತ್ತಿರುವ ಗಂಟಲು ಮತ್ತು/ಅಥವಾ ಕೆಮ್ಮನ್ನು ಅನುಭವಿಸುತ್ತಿದ್ದಾರೆಂದು ಹೇಳಿದ್ದಾರೆ. 56 ರಷ್ಟು ಜನರು ಕಣ್ಣು ಉರಿ ಅಥವಾ ಸುಡುವಂತ ಸೆನ್ಸೇಷನ್ ಬಗ್ಗೆ ದೂರು ನೀಡಿದ್ದಾರೆ. 50 ಪ್ರತಿಶತ ಜನರು ಸ್ರವಿಸುವ ಮೂಗಿನ ಸಮಸ್ಯೆ ಕುರಿತು ಹೇಳಿದ್ದರೆ, 44 ಪ್ರತಿಶತ ಜನರು ಉಸಿರಾಟದ ತೊಂದರೆ ಆಸ್ತಮಾದ ಅಡಿಯಲ್ಲಿ ತತ್ತರಿಸುತ್ತಿದ್ದಾರೆ. 44 ರಷ್ಟು ಜನರು ತಲೆನೋವಿನಿಂದ ಬಳಲುತ್ತಿದ್ದು 44 ಪ್ರತಿಶತ ಜನರು ನಿದ್ರೆಯಲ್ಲಿ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಅಧ್ಯಯನವು ಬಹಿರಂಗ ಪಡಿಸಿದೆ.
ಲೋಕಲ್ ಸರ್ಕಲ್ಸ್ ಸಂಸ್ಥಾಪಕ ಸಚಿನ್ ತಪರಿಯಾ, “ದೆಹಲಿ-ಎನ್‌ಸಿಆರ್‌ನಲ್ಲಿ ಐದು ಕುಟುಂಬಗಳಲ್ಲಿ ನಾಲ್ವರು ಕೆಲವು ಸದಸ್ಯರು ಮಾಲಿನ್ಯ-ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಳೆದ ಐದು ದಿನಗಳಲ್ಲಿ ಪರಿಸ್ಥಿತಿ ಹದಗೆಟ್ಟಿದೆ.” ಎಂದು ಹೇಳಿದ್ದಾರೆ ಎಂದು ಮೂಲಗಳ ವರದಿ ಉಲ್ಲೇಖಿಸಿದೆ.