November 12, 2026
Thursday, November 12, 2026
spot_img

‘ಧುರಂಧರ್ 2’ ದಾಖಲೆ ಮುರಿಯುತ್ತಾ ರಾಮಾಯಣ? ಸಾವಿರ ಕೋಟಿ ಕ್ಲಬ್ ಸನಿಹದಲ್ಲಿ ಮಹಾಕಾವ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಮಿತ್ ಮಲ್ಹೋತ್ರಾ ನಿರ್ಮಾಣದ ಹಾಗೂ ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ಮಹಾಕಾವ್ಯ ‘ರಾಮಾಯಣ ಭಾಗ-1’ ಬಿಡುಗಡೆಯಾದ ಕೇವಲ ಏಳೇ ದಿನಗಳಲ್ಲಿ ವಿಶ್ವದಾದ್ಯಂತ 900 ಕೋಟಿ ರೂಪಾಯಿಗಳ ಗಡಿ ದಾಟಿ ಹೊಸ ಇತಿಹಾಸ ಸೃಷ್ಟಿಸಿದೆ. ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ.

ಚಿತ್ರೋದ್ಯಮದ ವಿಶ್ಲೇಷಕರಾದ ಸ್ಯಾಕ್ನಿಲ್ಕ್ ವರದಿಯ ಪ್ರಕಾರ, ಏಳನೇ ದಿನವಾದ ಬುಧವಾರದಂದು ಈ ಚಿತ್ರ ಭಾರತದ ಎಲ್ಲಾ ಭಾಷೆಗಳಿಂದ 70.65 ಕೋಟಿ ರೂಪಾಯಿ ಗಳಿಸಿದೆ. ಇದರೊಂದಿಗೆ ಭಾರತದಲ್ಲಿ ಚಿತ್ರದ ಒಟ್ಟು ಗಳಿಕೆ 511.10 ಕೋಟಿ ರೂ. ಹಾಗೂ ಒಟ್ಟು ಗ್ರಾಸ್ ಗಳಿಕೆ 611.05 ಕೋಟಿ ರೂ. ತಲುಪಿದೆ. ಈ ಮೂಲಕ ‘ಧುರಂಧರ್ 2’ ನಂತರ ಭಾರತದಲ್ಲಿ ಅತಿ ವೇಗವಾಗಿ 500 ಕೋಟಿ ರೂ. ಕ್ಲಬ್ ಸೇರಿದ ಎರಡನೇ ಚಿತ್ರ ಎಂಬ ಹೆಗ್ಗಳಿಕೆಗೆ ‘ರಾಮಾಯಣ’ ಪಾತ್ರವಾಗಿದೆ.

ದೇಶಾದ್ಯಂತ 24,239 ಪ್ರದರ್ಶನಗಳಲ್ಲಿ ಶೇ. 43.4 ರಷ್ಟು ಪ್ರೇಕ್ಷಕರ ಭರ್ತಿಯೊಂದಿಗೆ ಹಿಂದಿ ಆವೃತ್ತಿ ಒಂದರಿಂದಲೇ ಬುಧವಾರ 58 ಕೋಟಿ ರೂ. ಹರಿದುಬಂದಿದೆ. ಕನ್ನಡದಲ್ಲಿ 4.50 ಕೋಟಿ, ತೆಲುಗು ಮತ್ತು ಮಲಯಾಳಂನಲ್ಲಿ ತಲಾ 2.75 ಕೋಟಿ ಹಾಗೂ ತಮಿಳಿನಲ್ಲಿ 2.65 ಕೋಟಿ ರೂ. ಸಂಗ್ರಹವಾಗಿದೆ.

ವಿದೇಶಿ ಮಾರುಕಟ್ಟೆಯಲ್ಲೂ ‘ರಾಮಾಯಣ’ ಅಬ್ಬರ ಜೋರಾಗಿದ್ದು, ಏಳನೇ ದಿನ 25 ಕೋಟಿ ರೂ. ಗಳಿಸುವ ಮೂಲಕ ಒಟ್ಟು ವಿದೇಶಿ ಗಳಿಕೆಯನ್ನು 323.50 ಕೋಟಿ ರೂ.ಗೆ ಹೆಚ್ಚಿಸಿಕೊಂಡಿದೆ. ಇದರೊಂದಿಗೆ ಚಿತ್ರದ ಒಟ್ಟು ಜಾಗತಿಕ ಗಳಿಕೆ 934.55 ಕೋಟಿ ರೂ. ಆಗಿದ್ದು, ಇಂದೇ 1,000 ಕೋಟಿ ರೂ. ಕ್ಲಬ್ ಸೇರುವುದು ಖಚಿತವಾಗಿದೆ.

ಸುಮಾರು 4,000 ಕೋಟಿ ರೂ. ಬೃಹತ್ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ, 2026ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಮೂರನೇ ಭಾರತೀಯ ಚಿತ್ರವಾಗಿ ಹೊರಹೊಮ್ಮಿದೆ. ಸದ್ಯ 1,852 ಕೋಟಿ ರೂ. ಗಳಿಸಿರುವ ರಣವೀರ್ ಸಿಂಗ್ ಅಭಿನಯದ ‘ಧುರಂಧರ್: ದಿ ರಿವೆಂಜ್’ ಮೊದಲ ಸ್ಥಾನದಲ್ಲಿದೆ. ಆದರೆ, ‘ರಾಮಾಯಣ’ ಚಿತ್ರಕ್ಕೆ ಯು (U) ಪ್ರಮಾಣಪತ್ರ ಸಿಕ್ಕಿರುವುದು ಮತ್ತು ಸೋನಿ ಪಿಕ್ಚರ್ಸ್ ಸಹಯೋಗದಲ್ಲಿ 100ಕ್ಕೂ ಹೆಚ್ಚು ದೇಶಗಳ 50,000 ಪರದೆಗಳಲ್ಲಿ ಬಿಡುಗಡೆಯಾಗುತ್ತಿರುವುದು ದೊಡ್ಡ ವರದಾನವಾಗಿದೆ. ‘ಧುರಂಧರ್ 2’ ಗಳಿಕೆಯನ್ನು ‘ರಾಮಾಯಣ’ ಹಿಂದಿಕ್ಕುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.

Must Read

Skip to toolbar