ಅಕ್ರಮ ಬಾಂಗ್ಲಾ ವಲಸಿಗ ಕಾರ್ಮಿಕರ ವಿರುದ್ಧ ಕ್ರಮಕ್ಕೆ ಒತ್ತಾಯ: ಕೊಡಗು ಸುರಕ್ಷಾ ಸಮಿತಿಯಿಂದ ಪ್ರತಿಭಟನೆ

ಹೊಸದಿಗಂತ ವರದಿ ಮಡಿಕೇರಿ :

ಅಕ್ರಮ ಬಾಂಗ್ಲಾ ವಲಸಿಗ ಕಾರ್ಮಿಕರು ಕೊಡಗು ಜಿಲ್ಲೆಯಲ್ಲಿ ನಡೆಸುತ್ತಿರುವ ಅಪರಾಧ ಪ್ರಕರಣಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ವಲಸಿಗರನ್ನು ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಕೊಡಗು ಸುರಕ್ಷಾ ಸಮಿತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಯಿತು.

ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಜಮಾಯಿಸಿದ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಘೋಷಣೆಗಳನ್ನು ಕೂಗಿ ವಲಸೆ ಕಾರ್ಮಿಕರ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಒತ್ತಾಯಿಸಿದರು.

ಹಿಂದೂ ಜಾಗರಣ ಯುವ ಘಟಕ, ಹಿಂದು ಯುವ ವಾಹಿನಿಯ ಜಿಲ್ಲಾ ಸಂಚಾಲಕ ವಿನಯ್ ಮಾತನಾಡಿ, ಅಕ್ರಮ ಬಾಂಗ್ಲಾ ಮೂಲದ ವಲಸಿಗರು ಭಾರತದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಕೊಡಗು ಜಿಲ್ಲೆಯ ಕಾಫಿ ತೋಟಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ಅಪರಾಧ ಪ್ರಕರಣಗಳಲ್ಲಿ ಇವರುಗಳ ಪಾತ್ರ ಎದ್ದು ಕಾಣುತ್ತಿದ್ದು, ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಅಧಿಕಾರಿಗಳು ಅಕ್ರಮ ವಲಸಿಗರ ಮೇಲೆ ನಿಗಾ ಇಡಬೇಕು ಮತ್ತು ಅವರ ಬಳಿ ಇರುವ ದಾಖಲೆಗಳನ್ನು ಪರಿಶೀಲಿಸಿ ಅಸಲಿಯೇ ಎಂದು ಖಾತ್ರಿ ಪಡಿಸಿಕೊಳ್ಳಬೇಕು. ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಕೊಡಗಿಗೆ ಅನಾಹುತ ಕಾದಿದೆ ಎಂದು ಆತಂಕ ವ್ಯಕ್ತಪಡಿಸಿದರು.

ತೋಟದ ಮಾಲಿಕರು, ಒಂಟಿ ಮಹಿಳೆಯರು, ವಯೋವೃದ್ಧರು ಹಾಗೂ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಪೊಲೀಸ್ ಇಲಾಖೆ ತಕ್ಷಣ ಅಕ್ರಮ ವಲಸೆ ಕಾರ್ಮಿಕರನ್ನು ಪತ್ತೆ ಹಚ್ಚಬೇಕು ಮತ್ತು ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಹಿಂದೂ ಜಾಗರಣ ವೇದಿಕೆಯ ಕೊಡಗು ಜಿಲ್ಲಾ ಸಂಚಾಲಕ ಕುಕ್ಕೇರ ಅಜಿತ್, ಸಹ ಸಂಚಾಲಕ ಚೇತನ್, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್, ನಗರಸಭಾ ಸದಸ್ಯ ಕವನ್ ಕಾವೇರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಪ್ರಚಾರ ಪ್ರಮುಖ್ ಕುಮಾರ್, ಮಾತೃ ಸುರಕ್ಷಾ ಪ್ರಮುಖ್ ಸುನಿಲ್, ಮಡಿಕೇರಿ ನಗರ ಸಂಚಾಲಕ ದುರ್ಗೇಶ್, ಪ್ರಮುಖರಾದ ಉಷಾ ದೇವಮ್ಮ, ಮಾದೇಟಿರ ತಿಮ್ಮಯ್ಯ, ಪಿ.ಎಂ.ರವಿ, ಪಿ.ಎ.ರವೀಂದ್ರ, ಶಾಂತೆಯಂಡ ತಿಮ್ಮಯ್ಯ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!