ಹೊಸದಿಗಂತ ಡಿಜಿಟಲ್ ಡೆಸ್ಕ್:
ತಿರುಪತಿಗೆ ಪ್ರತ್ಯೇಕ ರಾಜ್ಯ,ಕೇಂದ್ರಾಡಳಿತ ಪ್ರದೇಶ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಶುಕ್ರವಾರ ಡಾ.ಕೆಎ ಪಾಲ್ ಅವರು ಮಂಡಿಸಿದ ವಾದವನ್ನು ಆಲಿಸಿದ ಬಳಿಕ ನ್ಯಾಯಮೂರ್ತಿ ಬಿ ಆರ್ ಗವಾಯಿ ಮತ್ತು ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್ ಅವರ ಪೀಠವು ಈ ಆದೇಶವನ್ನು ನೀಡಿದೆ.
ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತಿರುಮಲ ಲಡ್ಡುವಿಗೆ ಪ್ರಾಣಿಗಳ ಕೊಬ್ಬನ್ನು ಬಳಸಲಾಗಿದೆ ಎಂದು ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಬಿಐನಿಂದ ತನಿಖೆ ನಡೆಸುವಂತೆ ಪ್ರಜಾಶಾಂತಿ ಪಕ್ಷದ ಅಧ್ಯಕ್ಷ ಕೆಎ ಪಾಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದರ ಜೊತೆಗೆ ತಿರುಮಲವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆಯೂ ಕೇಳಿಕೊಂಡಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ನಿಮ್ಮ ಕೋರಿಕೆಯಂತೆ ನಡೆದರೆ, ದೇಶದ ಎಲ್ಲಾ ದೇವಾಲಯಗಳು ಮತ್ತು ಗುರುದ್ವಾರಗಳನ್ನು ಪ್ರತ್ಯೇಕ ರಾಜ್ಯಗಳನ್ನಾಗಿ ಮಾಡಬೇಕಾಗುತ್ತದೆ ಎಂದು ಹೇಳಿದೆ. ನಿರ್ದಿಷ್ಟ ಧರ್ಮಕ್ಕೆ ಪ್ರತ್ಯೇಕ ರಾಜ್ಯ ರಚನೆಗೆ ಆದೇಶ ನೀಡಲು ಸಾಧ್ಯವಿಲ್ಲ ಎಂದು ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ತಿರುಮಲವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡುವಂತೆ ತಾವು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೇವಲ ಐದು ನಿಮಿಷಗಳಲ್ಲಿ ವಿಚಾರಣೆ ನಡೆಸಿದೆ. ತಮ್ಮ ಅರ್ಜಿಯ ವಿಚಾರಣೆಗೆ ಕೇವಲ ಐದು ನಿಮಿಷಗಳ ಸಮಯವನ್ನು ಮಾತ್ರ ಸುಪ್ರೀಂ ಕೋರ್ಟ್ ನೀಡಿತ್ತು. ಈ ಕುರಿತು ಮತ್ತೊಮ್ಮೆ ಸುಪ್ರೀಂ ಕೋರ್ಟ್‌ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ಎಂದು ಡಾ. ಕೆಎ ಪಾಲ್ ತಿಳಿಸಿದ್ದಾರೆ.