7ನೇ ವೇತನ ಆಯೋಗ ಜಾರಿಗೆ ಆಗ್ರಹ: ರಾಜ್ಯ ಸರಕಾರಕ್ಕೆ ಏಳು ದಿನಗಳ ಗಡುವು ಕೊಟ್ಟ ನೌಕರರ ಸಂಘ!

ಹೊಸದಿಗಂತ ಡಿಜಿಟಲ್ ಡೆಸ್ಕ್:

7ನೇ ವೇತನ ಆಯೋಗ (7th Pay Commission) ಜಾರಿ ವಿಚಾರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘ (KSGEA) ಬೇಡಿಕೆ ಈಡೇರಿಸದಿದ್ದರೆ ಮಾ.1 ರಿಂದ ರಾಜ್ಯಾದ್ಯಂತ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರೆ ನೀಡಿದೆ.

ರಾಜ್ಯ ಬಜೆಟ್‌ ಮಂಡನೆ ವೇಳೆ ಏಳನೇ ವೇತನ ಆಯೋಗ ಜಾರಿ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ಅವರು ಪ್ರಸ್ತಾಪಿಸದಿರುವುದಕ್ಕೆ ನೌಕರರ ಸಂಘ ಸರ್ಕಾರದ ವಿರುದ್ಧ ಕಿಡಿಕಾರಿದೆ. ಈ ಹಿನ್ನೆಲೆಯಲ್ಲಿ ಸಂಘವು ಮಂಗಳವಾರ ತುರ್ತು ಕಾರ್ಯಕಾರಿಣಿ ಸಭೆ ಕರೆದು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದೆ.

ಏಳನೇ ವೇತನ ಆಯೋಗದ ಮಧ್ಯಂತರ ವರದಿ ಪಡೆದು 40% ಫಿಟ್ಮೆಂಟ್‌ನ್ನು ದಿನಾಂಕ 1.07.2022 ರಿಂದ ಜಾರಿಗೆ ತರುವುದು, ರಾಜಸ್ತಾನ, ಛತ್ತೀಸಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶ ರಾಜ್ಯಗಳಲ್ಲಿ ಎನ್‌ಪಿಎಸ್ ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆ ಜಾರಿಗೆ ತಂದಿರುವಂತೆಯೇ ಕರ್ನಾಟಕ ರಾಜ್ಯದಲ್ಲಿಯೂ ಮಾಡಬೇಕು ಎಂದು ಬೇಡಿಕೆಯಿಟ್ಟಿದೆ.

ಏಳು ದಿನಗಳ ಕಾಲಾವಕಾಶ ನೀಡಲಾಗುವುದು. ಬೇಡಿಕೆ ಈಡೇರಿಸದಿದ್ದರೆ ಮಾ.1 ರಿಂದ ರಾಜ್ಯದ ಎಲ್ಲಾ ಸರ್ಕಾರಿ ನೌಕರರು, ನಿಗಮ ಮತ್ತು ಮಂಡಳಿಗಳು ಅನುದಾನಿತ ಸಂಸ್ಥೆಯ ಎಲ್ಲ ನೌಕರರು ಅನಿರ್ದಿಷ್ಟಾವಧಿ ವರೆಗೆ ಕರ್ತವ್ಯಕ್ಕೆ ಗೈರು ಹಾಜರಾಗುವುದರ ಮೂಲಕ ಮುಷ್ಕರ ಮಾಡಲಾಗುವುದು ಎಂದು ಸಂಘವು ತಿಳಿಸಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!