September 8, 2026
Tuesday, September 8, 2026
spot_img

ಕಬಕ-ಪುತ್ತೂರು ನಿಲ್ದಾಣದಲ್ಲಿ ವಂದೇ ಭಾರತ್‌ ನಿಲುಗಡೆಗೆ ಆಗ್ರಹ: ಆನ್‌ಲೈನ್ ಅಭಿಯಾನಕ್ಕೆ ಭರ್ಜರಿ ಬೆಂಬಲ!

ಹೊಸದಿಗಂತ ಡಿಜಿಟಲ್ ಡೆಸ್ಕ್:


ಬೆಂಗಳೂರು–ಮಂಗಳೂರು ನಡುವೆ ಶೀಘ್ರದಲ್ಲೇ ಸಂಚಾರ ಆರಂಭಿಸುವ ನಿರೀಕ್ಷೆಯಲ್ಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಬಕ-ಪುತ್ತೂರು ರೈಲು ನಿಲ್ದಾಣದಲ್ಲಿ ನಿಲುಗಡೆ ನೀಡಬೇಕು ಎಂಬ ಆಗ್ರಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂಬಂಧ ಪುತ್ತೂರು ಹಾಗೂ ಸುತ್ತಮುತ್ತಲಿನ ರೈಲು ಪ್ರಯಾಣಿಕರು ಆನ್‌ಲೈನ್ ಸಹಿ ಅಭಿಯಾನ ಆರಂಭಿಸಿದ್ದಾರೆ.


ಪುತ್ತೂರು–ಸುಬ್ರಹ್ಮಣ್ಯ ರೈಲು ಬಳಕೆದಾರರ ಸಂಘ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರು ಜಂಟಿಯಾಗಿ ಆ. 21ರಂದು ಅಭಿಯಾನ ಆರಂಭಿಸಿದ್ದು, ಆಗಸ್ಟ್ 24ರ ಮಧ್ಯರಾತ್ರಿವರೆಗೆ ಸಹಿ ಸಂಗ್ರಹಿಸಲು ಅವಕಾಶ ನೀಡಲಾಗಿದೆ. ಅಭಿಯಾನಕ್ಕೆ ಈಗಾಗಲೇ 1,650ಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿದ್ದಾರೆ.


ವಂದೇ ಭಾರತ್‌ ಟ್ರಯಲ್ ರನ್ ಬಳಿಕ ಹೆಚ್ಚಿದ ಆತಂಕ


ಬೆಂಗಳೂರು–ಮಂಗಳೂರು ವಂದೇ ಭಾರತ್ ರೈಲಿನ ಟ್ರಯಲ್ ರನ್‌ಗಳು ಆಗಸ್ಟ್ 11ರಿಂದ 20ರವರೆಗೆ ನಡೆದಿವೆ. ಇದರಿಂದ ಹೊಸ ರೈಲು ಸೇವೆ ಶೀಘ್ರದಲ್ಲೇ ಆರಂಭವಾಗುವ ಸಾಧ್ಯತೆ ಇದ್ದು, ವೇಳಾಪಟ್ಟಿ ಅಂತಿಮಗೊಳ್ಳುವ ಮುನ್ನವೇ ಕಬಕ-ಪುತ್ತೂರು ನಿಲುಗಡೆ ವಿಚಾರದಲ್ಲಿ ಸ್ಥಳೀಯರು ಒತ್ತಾಯ ಮುಂದಿಟ್ಟಿದ್ದಾರೆ. ಕಬಕ-ಪುತ್ತೂರು ನಿಲ್ದಾಣವನ್ನು ವಂದೇ ಭಾರತ್ ಸೇವೆಯಲ್ಲಿ ಸೇರಿಸದಿದ್ದರೆ, ಪುತ್ತೂರು ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಪ್ರದೇಶಗಳ ಪ್ರಯಾಣಿಕರು ಬೇರೆ ನಿಲ್ದಾಣಕ್ಕೆ ರಸ್ತೆ ಮಾರ್ಗವಾಗಿ ತೆರಳಿ ರೈಲು ಹಿಡಿಯಬೇಕಾದ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ವ್ಯಕ್ತವಾಗಿದೆ.


ಪುತ್ತೂರು ಮಾತ್ರವಲ್ಲ, ಹಲವು ಪ್ರದೇಶಗಳಿಗೆ ಅನುಕೂಲ


ಕಬಕ-ಪುತ್ತೂರು ನಿಲ್ದಾಣವು ಸುಳ್ಯ, ಉಪ್ಪಿನಂಗಡಿ, ವಿಟ್ಲ, ಬೆಳ್ಳಾರೆ ಸೇರಿದಂತೆ ವಿಶಾಲ ಗ್ರಾಮೀಣ ಪ್ರದೇಶಗಳಿಗೆ ಪ್ರಮುಖ ರೈಲು ಸಂಪರ್ಕ ಕೇಂದ್ರವಾಗಿದೆ. ವಿದ್ಯಾರ್ಥಿಗಳು, ಉದ್ಯೋಗಿಗಳು, ವ್ಯಾಪಾರಸ್ಥರು ಸೇರಿದಂತೆ ಪ್ರತಿದಿನ ವಿವಿಧ ವರ್ಗದ ಪ್ರಯಾಣಿಕರು ಈ ನಿಲ್ದಾಣವನ್ನು ಬಳಸುತ್ತಾರೆ.


ವಂದೇ ಭಾರತ್‌ ನಿಲುಗಡೆ ಇಲ್ಲದಿದ್ದರೆ ಈ ಭಾಗದ ಪ್ರಯಾಣಿಕರು ಮತ್ತೊಂದು ನಿಲ್ದಾಣ ತಲುಪಲು ಹೆಚ್ಚುವರಿ ರಸ್ತೆ ಪ್ರಯಾಣ ಮಾಡಬೇಕಾಗುತ್ತದೆ. ಇದರಿಂದ ಸಮಯ ಹಾಗೂ ಪ್ರಯಾಣ ವೆಚ್ಚ ಹೆಚ್ಚುವುದರ ಜತೆಗೆ ಹಿರಿಯ ನಾಗರಿಕರು, ವಿದ್ಯಾರ್ಥಿಗಳು ಮತ್ತು ಕುಟುಂಬಗಳಿಗೂ ಅನಾನುಕೂಲವಾಗಲಿದೆ ಎಂಬುದು ಅಭಿಯಾನ ನಡೆಸುತ್ತಿರುವವರ ವಾದ.


ರೈಲ್ವೆಗೂ ಲಾಭವಾಗಲಿದೆ ಎಂಬ ವಾದ

ಕಬಕ-ಪುತ್ತೂರಿನಲ್ಲಿ ನಿಲುಗಡೆ ನೀಡುವುದರಿಂದ ಸ್ಥಳೀಯ ಪ್ರಯಾಣಿಕರಿಗೆ ಮಾತ್ರವಲ್ಲ, ರೈಲ್ವೆ ಇಲಾಖೆಯ ಆದಾಯಕ್ಕೂ ಪ್ರಯೋಜನವಾಗಬಹುದು ಎಂದು ಅಭಿಯಾನಕಾರರು ಹೇಳಿದ್ದಾರೆ. ಈ ನಿಲ್ದಾಣದ ನೈಜ ಪ್ರಯಾಣಿಕರ ಬೇಡಿಕೆಯನ್ನು ರೈಲ್ವೆ ಇಲಾಖೆ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆ (SWR) ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ವಂದೇ ಭಾರತ್‌ನ ಅಂತಿಮ ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿ ಕಬಕ-ಪುತ್ತೂರಿನಲ್ಲಿ ನಿಲುಗಡೆ ಕಲ್ಪಿಸಬೇಕು ಎಂಬುದು ಸ್ಥಳೀಯರ ಪ್ರಮುಖ ಆಗ್ರಹವಾಗಿದೆ. ಪ್ರಸ್ತುತ ನಡೆಯುತ್ತಿರುವ ಆನ್‌ಲೈನ್ ಸಹಿ ಅಭಿಯಾನವು ಈ ಬೇಡಿಕೆಗೆ ಸಾರ್ವಜನಿಕ ಬೆಂಬಲ ಎಷ್ಟಿದೆ ಎಂಬುದನ್ನು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರುವ ಉದ್ದೇಶ ಹೊಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !