ಹೊಸದಿಗಂತ ವರದಿ,ಕಾರವಾರ:
ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಗೋ ಸಾಗಣೆ ಹಾಗೂ ಗೋ ಹತ್ಯೆ ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರವಾರ ಜಿಲ್ಲಾ ಘಟಕದ ವತಿಯಿಂದ ಗೋ ರಕ್ಷಾ ಅಭಿಯಾನವನ್ನು ಆರಂಭಿಸಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ಅಕ್ರಮ ಗೋ ಸಾಗಣೆ ಮತ್ತು ಗೋ ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ, ಈ ಕುರಿತು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರೀಷ್ಠಾಧಿಕಾರಿ ಅವರಿಗೆ ಮನವಿ ಸಲ್ಲಿಸಲಾಗಿದೆ.
ಗೋವಿನ ರಕ್ಷಣೆಗೆ ಆದ್ಯತೆ ನೀಡಲು ಆಗ್ರಹ
ಗೋ ಹತ್ಯೆ ನಿಷೇಧ ಮತ್ತು ಸಂರಕ್ಷಣಾ ವಿಧೇಯಕ 2020ರ ಅಡಿಯಲ್ಲಿ ಕಾನೂನುಬದ್ಧ ಕ್ರಮ ಜರುಗಿಸಿ ಗೋವಿನ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಸಂಘಟನೆ ಒತ್ತಾಯಿಸಲಾಗಿದೆ.
ಅಭಿಯಾನದ ಭಾಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಗೋ ಕಳ್ಳಸಾಗಣೆ ವಿರುದ್ಧ ಮಾಹಿತಿ ಸಂಗ್ರಹಿಸುವುದು ಹಾಗೂ ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಕ್ರಮ ಕೈಗೊಳ್ಳುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಪ್ರಮುಖ ಬೇಡಿಕೆಗಳು :
ಜಿಲ್ಲೆಯ ಎಲ್ಲಾ ಗಡಿಭಾಗಗಳಲ್ಲಿ (ಬಾರ್ಡರ್‌ಗಳಲ್ಲಿ) ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು.
ಒಂದು ತಿಂಗಳ ಅವಧಿಯವರೆಗೆ ಜಿಲ್ಲೆಯಲ್ಲಿ ನಡೆಯುವ ಜಾನುವಾರು ಸಂತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕು.
ಗೋ ರಕ್ಷಣೆಯ ಸಂದರ್ಭದಲ್ಲಿ ಬಜರಂಗದಳ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಬೇಕು.
ಕಾರವಾರ ತಾಲೂಕಿನ ಕಡವಾಡ ಪ್ರದೇಶದಲ್ಲಿ ರಾತ್ರಿ ವೇಳೆ ವಿಶೇಷ ನಾಕಾಬಂದಿ (ಪರಿಶೀಲನಾ ಕಾರ್ಯಾಚರಣೆ) ನಡೆಸಬೇಕು ಎಂದು ಒತ್ತಾಯಿಸಲಾಗಿದೆ.
ಜಿಲ್ಲಾ ಸಮಿತಿಯ ವತಿಯಿಂದ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಇವರಿಗೆ ಮನವಿ ಸಲ್ಲಿಸಲಾಯಿತು.
ಹಾಗೆಯೇ ಕಾರವಾರ ತಾಲೂಕಿನ ವತಿಯಿಂದ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು. ಅಲ್ಲದೆ ಗ್ರಾಮೀಣ ಸಮಿತಿಯ ವತಿಯಿಂದ ಚಿತ್ತಾಕುಲ ಪೊಲೀಸ್ ಠಾಣೆಯ ಪಿಎಸ್ಐ ಅವರಿಗೆ ಸಹ ಮನವಿ ನೀಡಲಾಯಿತು.
ವಿಶ್ವ ಹಿಂದೂ ಪರಿಷತ್ ಜಿಲ್ಲಾ ಉಪಾಧ್ಯಕ್ಷ ಎನ್. ಆರ್. ಮುಕ್ರಿ, ಜಿಲ್ಲಾ ಸಹಕಾರ್ಯದರ್ಶಿ ಸೂರಜ್ ಸುರೇಶ್ ನಾಯ್ಕ, ಜಿಲ್ಲಾ ಸಹಕಾರ್ಯದರ್ಶಿ ಸಂತೋಷ್ ನಾಯ್ಕ , ಜಿಲ್ಲಾ ಗೋರಕ್ಷಾ ಪ್ರಮುಖ ಶ್ರೀನಿವಾಸ ಗುನಗಿ, ತಾಲೂಕ ಸಹಕಾರ್ಯದರ್ಶಿ ಮನೋಜ್ ಬಾಂದೇಕರ್, ತಾಲೂಕ ಬಜರಂಗದಳ ಸಂಯೋಜಕ ಅಮಿತ್ ಮಾಲ್ಸೇಕರ್, ಸಾಯಿಕಿರಣ್ ನಾಗೇಕರ್, ಓಂಕಾರ ಅಂಕೋಲೆಕರ್, ಧೀರಜ್ ರಾಣೆ, ಬಬನ್ ಶೆಟ್ಟಿ, ಅಮಿತ್ ಕಾಮತ್, ಪ್ರಕಾಶ್ ಶೇಟ್, ಪ್ರಜ್ಞಾ ರೇವಣಕರ್,ಬಿಜೆಪಿ ಗ್ರಾಮೀಣ ಅಧ್ಯಕ್ಷ ಸುಭಾಷ ಗುನಗಿ ಬಿಜೆಪಿ, ಅಭಾವಿಪ, ಕಿಸಾನ್ ಸಂಘದ ಕಾರ್ಯಕರ್ತರು ಇದ್ದರು



